ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಸೋಮವಾರದ ಬದಲಾಗಿ ಮಂಗಳವಾರ ರಜೆ ನೀಡಲು ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಕರ್ನಾಟಕದಲ್ಲಿ ಗಣೇಶ ಹಬ್ಬದ ದಿನದ ರಜೆಯ ಬಗ್ಗೆ ಗೊಂದಲಗಳಿದ್ದು, ಹಲವೆಡೆ ಸೋಮವಾರ (ಸೆ.18) ರಂದು ಹಬ್ಬ ಆಚರಿಸುತ್ತಿದ್ದರೆ, ಮತ್ತೆ ಕೆಲವೆಡೆ ಮಂಗಳವಾರ(ಸೆ.19) ರಂದು ಆಚರಿಸಲಾಗುತ್ತಿದೆ.
ಸರ್ಕಾರ ನಿಗದಿ ಪಡಿಸಿದ ರಜೆಯು ಸೋಮವಾರ ಎಂದು ಕ್ಯಾಲೆಂಡರ್ ನಲ್ಲಿ ಉಲ್ಲೇಖವಾಗಿತ್ತು. ಕರಾವಳಿ ಜಿಲ್ಲೆಯಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಎಂದು ಒತ್ತಯಿಸಲಾಗಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಕೂಡಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಯವರಿಗೆ ಸೆ.19ರಂದು ರಜೆ ನೀಡಲು ಪತ್ರ ಮೂಲಕ ತಿಳಿಸಿದ್ದರು. ಇದೀಗ ಸರ್ಕಾರದ ಅಧಿಕೃತ ಆದೇಶ ಬಂದಿದೆ.