
ಉಡುಪಿ: ಆನ್‌ಲೈನ್ ಪಾರ್ಟ್‌ಟೈಮ್ ಕೆಲಸ ಹಾಗೂ ಆನ್‌ಲೈನ್ ಟ್ರೇಡಿಂಗ್ ಮೇಸೆಜ್ ನ ಬಲೆಗೆ ಬಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ 17.35 ಲಕ್ಷ ರೂ. ಕಳೆದುಕೊಂಡ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೇರೂರು ಗ್ರಾಮದ ಕೊಳಂಬೆಯ ಸುಬ್ರಹ್ಮಣ್ಯ ಎಂಬವರೆ ಹಣ ಕಳೆದುಕೊಂಡ ವ್ಯಕ್ತಿ. ಇವರಿಗೆ ಇನ್‌ಸ್ಟಾಗ್ರಾಮ್ ನಲ್ಲಿ ಪಾರ್ಟ್‌ಟೈಮ್ ಕೆಲಸ ಹಾಗೂ ಆನ್‌ಲೈನ್ ಟ್ರೇಡಿಂಗ್ ಮೇಸೆಜ್ ಬಂದಿತ್ತು. ಅದರಂತೆ ಆರೋಪಿಯ ಸೂಚನೆಯಂತೆ ವಾಟ್ಸಪ್ ನಂಬರ್‌ಗೆ ಮೇಸೆಜ್ ಮಾಡಿದ್ದು, ಅದರಲ್ಲಿ ಬಂದ ಸೂಚನೆಯಲ್ಲಿ ಕೆಲವು ಟಾಸ್ಕ್‌ನ್ನು ಪೂರೈಸಿ 9000ರೂನಷ್ಟು ಹಣ ಪಡೆದಿದ್ದು, ಬಳಿಕ ಟ್ರೇಡಿಂಗ್ ಮಾಡುವ ಸಲುವಾಗಿ ಹಣ ಹೂಡಿಕೆ ಮಾಡಲು ನೀಡಿದ ಸೂಚನೆಯಂತೆ ಮೇ 6ರಿಂದ 9ರ ನಡುವಿನ ಅವಧಿಯಲ್ಲಿ ತನ್ನ ಖಾತೆಯೂ ಅಲ್ಲದೇ ಹೆಂಡತಿ ಹಾಗೂ ಅತ್ತೆಯ ಅಕೌಂಟಿ ನಿಂದಲೂ ಆರೋಪಿ ಸೂಚಿಸಿದ ಬೇರೆ ಬೇರೆ ಖಾತೆಗಳಿಗೆ ಒಟ್ಟು 17,35,000 ರೂ. ಹಣವನ್ನು ಕಳುಹಿಸಿದ್ದರು. ಆದರೆ ಹಣವನ್ನು ಪಡೆದ ಆರೋಪಿ ತಮಗೆ ಬರಬೇಕಾದ ಹಣದ ಬಗ್ಗೆ ಯಾವುದೇ ಮಾಹಿತಿ ನೀಡದೇ ನಂಬಿಸಿ ಮೋಸ ಗೊಳಿಸುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.