ಬಂಟ್ವಾಳ: ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದು, ಸುರತ್ಕಲ್ ಕೃಷ್ಣಾಪುರ ನಿವಾಸಿ ಮಹಮ್ಮದ್ ಶಾಫಿ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
2017 ರಲ್ಲಿ ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯ ಕಳ್ಳತನ ಪ್ರಕರಣವೊಂದರ ಆರೋಪಿ ಈತ ಆಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾಗೂ ಜಿಲ್ಲೆಯ ವಿವಿಧ ಠಾಣೆಯಲ್ಲಿ ಈತನ ಮೇಲೆ ಕಳ್ಳತನ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳಿದ್ದು, ಅ ಪ್ರಕರಣದಲ್ಲಿಯೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಇದೀಗ ಖಚಿತ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಇನ್ಸ್ ಪೆಕ್ಟರ್ ಶಿವಕುಮಾರ್, ಉಪನಿರೀಕ್ಷಕರಾದ ಹರೀಶ್ ಮತ್ತು ಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಗಣೇಶ್ ಪ್ರಸಾದ್, ಪುನೀತ್ ಕುಮಾರ್, ವಿಜಯಕುಮಾರ್, ರಂಜಾನ್ ಅವರು ಪುತ್ತೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.