ನೈರುತ್ಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಶಾಸಕ

Share with

ಉಡುಪಿ: ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ‌.
ಉಡುಪಿ ಕರಂಬಳ್ಳಿಯ ಸ್ವಗೃಹದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘುಪತಿ ಭಟ್ ಅವರು, ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷವು ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಿತ್ತು. ಆ ಸಂದರ್ಭದಲ್ಲಿಯೂ ಭಟ್ ಅವರು ಬೇಸರಗೊಂಡಿದ್ದರು. ಬಳಿಕ ಪಕ್ಷದ ವರಿಷ್ಠರು ವಿಧಾನ ಪರಿಷತ್ ನಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ, ಅಭ್ಯರ್ಥಿಯ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲೂ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿಯನ್ನು ವಹಿಸಿಕೊಂಡು ಅಭ್ಯರ್ಥಿಯ ಪರವಾಗಿ ಉತ್ತಮವಾಗಿ ಕೆಲಸ ಮಾಡಿದ್ದರು.
ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದ ರಘುಪತಿ ಭಟ್ ಅವರಿಗೆ ಕಡೆ ಕ್ಷಣದಲ್ಲಿ ಪಕ್ಷವು ಕೈಕೊಟ್ಟಿದೆ. ಶಿವಮೊಗ್ಗದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಭಟ್ ಆಸೆಗೆ ತಣ್ಣೀರೆರಚಿದೆ. ಪಕ್ಷದ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿರುವ ಭಟ್ ಅವರು ಸುದ್ದಿಗೋಷ್ಠಿ ನಡೆಸಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದರು. ನಾನು ಪಕ್ಷದ ವಿರುದ್ಧ, ನಾಯಕರ ವಿರುದ್ಧ ಸ್ಪರ್ಧೆ ಮಾಡುತ್ತಿಲ್ಲ. ನಾನು ಗೆದ್ದರೂ ಬಿಜೆಪಿಯಲ್ಲೇ ಉಳಿಯುತ್ತೇನೆ. ಅಪ್ಪಿತಪ್ಪಿ ಸೋತರೂ ಪಕ್ಷದಲ್ಲೇ ಇರುತ್ತೇನೆ ಎಂದರು.


Share with

Leave a Reply

Your email address will not be published. Required fields are marked *