ಪಡುಬಿದ್ರಿ: ಉಡುಪಿ ಕಡೆಯಿಂದ ಪಡುಬಿದ್ರಿಯತ್ತ ಬರುತ್ತಿದ್ದ ಟಿಪ್ಪರೊಂದು ರಸ್ತೆ ಬದಿ ನಿಂತಿದ್ದ ಪಿಕಪ್ ವ್ಯಾನ್‌ಗೆ ಢಿಕ್ಕಿಯಾಗಿ ಅದು ನೇರವಾಗಿ ಪಾದಚಾರಿಗೆ ಢಿಕ್ಕಿ ಹೊಡೆದ ಘಟನೆ ಇಲ್ಲಿನ ಕಾಮತ್ ಪೆಟ್ರೋಲ್ ಪಂಪ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ (ಸೆ.25) ನಡೆದಿದೆ.

ಅಪಘಾತದಲ್ಲಿ ಬಿಹಾರ ಮೂಲದ ಕಾರ್ಮಿಕ ರಾಜಕುಮಾರ ಶರ್ಮ(23) ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಪಿಕಪ್ ವಾಹನ ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸಂಘದ ಹಳೇ ಗೋಡೌನ್ ಗೋಡೆಗೆ ಬಡಿದು ನಿಂತಿದ್ದು, ಗೋಡೌನ್ ಗೋಡೆಯು ಒಡೆದು ಹೋಗಿ ಸಹಕಾರಿ ಸಂಘಕ್ಕೂ ನಷ್ಟವುಂಟಾಗಿದೆ.
ಟಿಪ್ಪರ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಈ ದುರ್ಘಟನೆಯು ನಡೆದಿದೆ. ಮೃತ ದುರ್ದೈವಿ ರಾಜಕುಮಾರ್ ಶರ್ಮ ಎರ್ಮಾಳಿನ ಪ್ರೈವುಡ್ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದು ತನ್ನ ಸಹ ಕಾರ್ಮಿಕರೊಂದಿಗೆ ನಡೆದುಕೊಂಡು ಪಡುಬಿದ್ರಿಯತ್ತ ಹೋಗುತ್ತಿದ್ದಾಗ ಈ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಪಿಕಪ್ ಬಡಿದು ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ ಆತನನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವಾಗಲೇ ಆತ ಉಸಿರುಚೆಲ್ಲಿದ್ದಾರೆ.




