ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ(ಜು.14) ಸಂಜೆ ಉಡುಪಿಗೆ ಆಗಮಿಸಿದ್ದು, ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಉಡುಪಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಉಡುಪಿ ಭೇಟಿಯ ವೇಳೆ ಖಾಸಗಿ ಹೋಟೆಲ್ ನಲ್ಲಿ ಪ್ರಬುದ್ಧ ಸಭೆ ನಡೆಯಿತು. ಈ ಸಭೆಯಲ್ಲಿ ಲೆಕ್ಕಪರಿಶೋಧಕರು, ಆರ್ಥಿಕ ತಜ್ಞರು, ವಿವಿಧ ಸಂಘಟನೆಗಳ ಪ್ರಮುಖರು ಭಾಗಿಯಾದರು.
ಕೇಂದ್ರ ಸರ್ಕಾರದ 9 ವರ್ಷಗಳ ಸಾಧನೆ ಕುರಿತು ಉಪನ್ಯಾಸ ನೀಡಿದ ಸಚಿವೆ, ಬಡ ಮಧ್ಯಮ ವರ್ಗ ಹಾಗೂ ಕೈಗಾರಿಕೆ ಉತ್ತೇಜನಗಳಿಗೆ ಬಜೆಟ್ ನ ಸ್ಪಂದನೆ ಕುರಿತು ಮಾತುಕತೆ ನಡೆಸಿದರು.
ಆದಾಯ ತೆರಿಗೆ ವಿಚಾರದಲ್ಲಿ ಅನೇಕ ಸುಧಾರಣೆ ತಂದಿದ್ದೇವೆ.7 ಲಕ್ಷದವರೆಗೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ. ಆದಾಯ ತೆರಿಗೆ ಮಿತಿಯನ್ನು 7,27,000 ಮಾಡಲಾಗಿದೆ. ಇದರಿಂದ ಮಧ್ಯಮ ವರ್ಗಕ್ಕೆ ತುಂಬಾ ಅನುಕೂಲವಾಗಲಿದೆ. ಜೀವ ಉಳಿಸುವ ಔಷಧಗಳು ಮತ್ತು ಕ್ಯಾನ್ಸರ್ ಮೆಡಿಸಿನ್ ಗಳಿಗೂ ವಿನಾಯಿತಿಯ ಲಾಭ ದೊರಕಲಿದೆ ಎಂದರು.
ಗುರುವಾರ ರಾತ್ರಿ ಉಡುಪಿಗೆ ಬಂದು ತಂಗಿದ್ದ ನಿರ್ಮಲಾ ಸೀತಾರಾಮನ್, ಶುಕ್ರವಾರ ಮುಂಜಾನೆ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಕೃಷ್ಣ ದರ್ಶನದ ಬಳಿಕ ಪರ್ಯಾಯ ಮಠಾಧೀಶರಿಂದ ಗೌರವ ಸ್ವೀಕರಿಸಿದರು. ಆ ಬಳಿಕ ಅದಮಾರು ಮಠಕ್ಕೆ ತೆರಳಿ, ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಜೊತೆಗೆ ಸಮಾಲೋಚನೆ ನಡೆಸಿದರು. ಅದೇ ಮಾರು ಮಠದ ವತಿಯಿಂದಲೂ ಸಚಿವೆಯನ್ನು ಗೌರವಿಸಲಾಯಿತು.