
ನವದೆಹಲಿ: ಕಳೆದ 10 ವರ್ಷದಲ್ಲಿ 25 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತರಲಾಗಿದೆ. ಈ ಹಿಂದೆ 40 ವರ್ಷಗಳ ಕಾಲ ಗರೀಬಿ ಹಠಾವೋ (ಬಡತನವನ್ನು ಹೊಡೆದೋಡಿಸಿ) ಎಂದು ಘೋಷಣೆ ಕೂಗಿದವರು ಬಡತನ ನಿರ್ಮೂಲನೆ ಮಾಡಲಿಲ್ಲ. ಆದರೆ, ನಾವು ಸುಳ್ಳಿನ ಘೋಷಣೆ ಮಾಡಿಲ್ಲ. 4 ದಶಕದಲ್ಲಿ ಮಾಡಲಾಗದ ಕೆಲಸವನ್ನು ಒಂದೇ ದಶಕದಲ್ಲಿ ನಾವು ಮಾಡಿದ್ದೇವೆ. ಬಡತನವನ್ನು ನಿವಾರಿಸುವ ಕೆಲಸ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಅಧಿವೇಶನದ ಭಾಷಣದಲ್ಲಿ ಹೇಳಿದ್ದಾರೆ. ಇಲ್ಲಿಯವರೆಗೆ ಬಡವರಿಗೆ 4 ಕೋಟಿ ಮನೆಗಳನ್ನು ನೀಡಲಾಗಿದೆ. ಕಷ್ಟದ ಜೀವನವನ್ನು ನಡೆಸಿದವರಿಗೆ ಮಾತ್ರ ಮನೆ ಪಡೆಯುವುದರ ಮೌಲ್ಯ ಏನೆಂದು ಅರ್ಥವಾಗುತ್ತದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಶೌಚಾಲಯ ವ್ಯವಸ್ಥೆಯ ಕೊರತೆಯಿಂದ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದರು. ಈ ಎಲ್ಲ ಸೌಲಭ್ಯಗಳನ್ನು ಹೊಂದಿರುವವರು ಅದರಿಂದ ವಂಚಿತರಾದವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.

ಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯಕ್ಕೆ ಉತ್ತರವಾಗಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ನಾವು 2025ನೇ ವರ್ಷದಲ್ಲಿದ್ದೇವೆ. 21ನೇ ಶತಮಾನದ 25% ಭಾಗ ಅಂತ್ಯವಾಗಿದೆ. ಸ್ವಾತಂತ್ರ್ಯದ ಬಳಿಕ ಏನು ಬದಲಾಗಿದೆ ಎಂಬುದನ್ನು ಸಮಯ ನಿರ್ಧಾರ ಮಾಡಲಿದೆ. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಭವಿಷ್ಯದ 25 ವರ್ಷದ ವಿಕಸಿತ್ ಭಾರತದ ಕಲ್ಪನೆಯನ್ನು ತೆರೆದಿಟ್ಟಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣ ವಿಕಸಿತ್ ಭಾರತದ ಸಂಕಲ್ಪವನ್ನು ಗಟ್ಟಿಗೊಳಿಸಿದೆ. ನಮ್ಮ ದೇಶದ ಜನರು 10 ವರ್ಷದಿಂದ ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಾರೆ. ಅವರಿಗೆ ಧನ್ಯವಾದ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.




