ಮಣಿಪಾಲ: ಯುವತಿ ವಾಸಿಸುತ್ತಿರುವ ಬಾಡಿಗೆ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ಆಕೆಯ ತಲೆಗೆ ಸಿಮೆಂಟ್ ಕಲ್ಲಿನಿಂದ ಹೊಡೆದು ಚಿನ್ನದ ಸರದೊಂದಿಗೆ ಪರಾರಿಯಾಗಿರುವ ಘಟನೆ ಅಲೆವೂರು ರಸ್ತೆಯ ಶಾಂತಿನಗರದ ಬಳಿ ಸಂಭವಿಸಿದೆ.

ಕುಮಟಾ ಕೂಜಲಿ ಗ್ರಾಮದ ಮೇಘಾ ಮಂಜುನಾಥ ಗೌಡ (25) ಅವರು ಸ್ನೇಹಿತೆಯರಾದ ನಾಗರತ್ನಾ, ಗಗನಾ ಮತ್ತು ಯೋಗಿತಾರೊಂದಿಗೆ ಶಾಂತಿನಗರದಲ್ಲಿ ಬಾಡಿಗೆ ರೂಮ್ ನಲ್ಲಿ ವಾಸವಾಗಿದ್ದರು.
ಸ್ನೇಹಿತೆಯರು ಮೇ 12ರ ಸಂಜೆ ಮಣಿಪಾಲದ ಕೈಗಾರಿಕೆ ಪ್ರದೇಶದ ಸಂಸ್ಥೆಗೆ ರಾತ್ರಿ ಪಾಳಿ ಕರ್ತವ್ಯಕ್ಕೆ ತೆರಳಿದ್ದರು. ಮೇ 13ರ ಬೆಳಗ್ಗೆ7.15ರ ಹೊತ್ತಿಗೆ ಕೆಲಸ ಮುಗಿಸಿ ಬಂದಾಗ ರೂಮಿನ ಬಾಗಿಲು ಅರೆ ತೆರೆದಿತ್ತು. ಮನೆಯೊಳಗೆ ಯೋಗಿತಾ ನೆಲದ ಮೇಲೆ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ಅವಳ ತಲೆಗೆ ಸಿಮೆಂಟ್ ಕಲ್ಲಿನಿಂದ ಬಲವಾಗಿ ಹೊಡೆಯಲಾಗಿತ್ತು. ಅವಳ ಕುತ್ತಿಗೆಯಲ್ಲಿದ್ದ 8 ಗ್ರಾಂ ತೂಕದ ಚಿನ್ನದ ಸರ ನಾಪತ್ತೆಯಾಗಿದೆ ಎಂದು ದೂರು ನೀಡಲಾಗಿದೆ. ಮೇಘಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿದವರು ಯಾರು ಎಂಬುದು ಗೊತ್ತಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




