
ಬೆಂಗಳೂರು: ಜಾಗತಿಕ ಟೆಕ್ ದೈತ್ಯ “ಗೂಗಲ್’ನ ಜಗತ್ತಿನ ಅತಿದೊಡ್ಡ ಕಟ್ಟಡಗಳಲ್ಲಿ ಒಂದಾಗಿರುವ ಇತ್ತೀಚೆಗೆ ಲೋಕಾರ್ಪಣೆಗೊಂಡ ಬೆಂಗಳೂರಿನ ಅನಂತ’ ಕಟ್ಟಡಕ್ಕೆ ಅತ್ಯಾಧುನಿಕ ರೀತಿಯಲ್ಲಿ ವಿದ್ಯುದೀಕರಣ ಮಾಡಿದ್ದು ಕನ್ನಡಿಗರ 2 ಹೆಮ್ಮೆಯ ಸಂಸ್ಥೆಗಳು.

ಶತಶತಮಾನಗಳ ಬಳಿಕ ಅಯೋಧ್ಯೆಯಲ್ಲಿ ಎದ್ದು ನಿಂತ ಅಯೋಧ್ಯೆಯ ಶ್ರೀರಾಮ ಮಂದಿರದ ಸಂಪೂರ್ಣ ವಿದ್ಯುದೀಕರಣ ಮಾಡಿದ ರಾಜ್ಯದ ಶಂಕರ್ ಎಲೆಕ್ಟಿಕಲ್ಸ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ವಿದ್ಯುದೀಕರಣ ಕ್ಷೇತ್ರದ ಆಧುನಿಕ ತಂತ್ರಜ್ಞಾನ ಗಳನ್ನು ಅಳವಡಿಸಿಕೊಂಡಿರುವ “ಅನಂತ’ದ ಬಹುತೇಕ ವಿದ್ಯುತ್ ಸಂಪರ್ಕದ ಜವಾಬ್ದಾರಿಗಳನ್ನು ನಿರ್ವಹಿಸಿದೆ. ಇವರ ಜತೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕಚೇರಿ ಹೊಂದಿರುವ ಮೈಕ್ರಾನ್ ಎಲೆಕ್ಟಿಕಲ್ಸ್ ಸಹ ಸೇರಿಕೊಂಡು ಕಾಮಗಾರಿ ಪೂರ್ಣಗೊಳಿಸಿದೆ.
ಮಹದೇವಪುರದಲ್ಲಿ 16 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸ್ಥಾಪನೆ ಆಗಿರುವ 3 ನೆಲ ಮಹಡಿ ಸೇರಿದಂತೆ ಒಟ್ಟು 14 ಮಹಡಿಗಳಿರುವ “ಅನಂತ’ ಕಟ್ಟಡದಲ್ಲಿ ಸುಮಾರು 5 ಸಾವಿರ ಮಂದಿ ಕೆಲಸ ನಿರ್ವಹಿಸಬಹುದಾಗಿದೆ.
ಇದರ ಜತೆಗೆ ಪ್ರತೀ ಮಹಡಿಗೂ ಒಂದು ಕಾನ್ಸೆಪ್ಟ್ ಇರಲಿದ್ದು ಅದರಂತೆ ವಿದ್ಯುದೀಕರಣ ವನ್ನು ವಿನ್ಯಾಸಗೊಳಿಸಿರುವುದು ಇಲ್ಲಿನ ವಿಶೇಷ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಮಿಜಾರು ಮೂಲದ ರಾಜೇಶ್ ಶೆಟ್ಟಿ ಅವರ ಮಾಲಕತ್ವದ ಶಂಕರ್ ಎಲೆಕ್ಟಿಕಲ್ಸ್ “ಆನಂತ’ ಕಟ್ಟಡದ ಆರಂಭದಿಂದಲೂ ವಿದ್ಯುದೀಕರಣ ಕಾಮಗಾರಿ ನಡೆಸಿತ್ತು. ಕಟ್ಟಡ ಕಟ್ಟುವ ಗುತ್ತಿಗೆ ಪಡೆದ ಭಾಗ್ಯನೆ ಟೆಕ್ ಪಾರ್ಕ್ ಸಂಸ್ಥೆಯು ವಿದ್ಯುದೀಕರಣಕ್ಕೆ ಆಯ್ಕೆ ಮಾಡಿಕೊಂಡಿದ್ದು ಶಂಕರ್ ಎಲೆಕ್ಟಿಕಲ್ಸ್ ಅನ್ನು. ಈಗಾಗಲೇ ಗೂಗಲ್‌ನ ಹೈದರಾಬಾದ್ ಮತ್ತು ಬೆಂಗಳೂರಿನ ಕೆಲ ಕಟ್ಟಡಗಳ ವಿದ್ಯುದೀಕರಣದ ಕೆಲಸ ಮಾಡಿದ್ದರ ಜತೆಗೆ ಟಿಸಿಎಸ್, ಅಮೆಜಾನ್ ನಂತಹ ಸಂಸ್ಥೆಗಳ ವಿದ್ಯುದೀಕರಣ ಮಾಡಿದ್ದ ಅನುಭವ ಮತ್ತು ಅಯೋಧ್ಯೆಯ ರಾಮಮಂದಿರದ ವಿದ್ಯುದೀಕರಣ ಮಾಡಿದ ಹೆಗ್ಗಳಿಕೆಯನ್ನು ಶಂಕರ್ ಎಲೆಕ್ಟಿಕಲ್ಸ್ ಹೊಂದಿದೆ.

ಲೈಟ್‌ಗಳು Auto OFF, ON:
ಕಟ್ಟಡದಲ್ಲಿ ಬೆಳಕು ನಿರ್ವಹಣೆ ವ್ಯವಸ್ಥೆ ಅಳವಡಿಸಲಾಗಿದೆ. ಇಲ್ಲಿ ಜನ ಇಲ್ಲದ ಸಂದರ್ಭದಲ್ಲಿ ದೀಪಗಳು ಸ್ವಯಂ ಚಾಲಿತವಾಗಿ ಬಂದ್ ಆಗುತ್ತವೆ.
ಜನ ಬಂದಾಗ ಲೈಟ್ ಉರಿಯುತ್ತವೆ. ಹಾಗೆಯೇ ಎಸಿ ಸಹ 22 ಡಿಗ್ರಿ ತಾಪಮಾನ ಮೀರಿದಾಗ ತನ್ನಷ್ಟಕ್ಕೆ ಕಾರ್ಯ ಆರಂಭಿಸುತ್ತದೆ. ವಿದ್ಯುದೀಕರಣದಲ್ಲಿ ಕೃತಕ ಬುದ್ಧಿಮತ್ತೆಯನ್ನು ವ್ಯಾಪಕವಾಗಿ ಬಳಸಲಾಗಿದೆ. ವಿದ್ಯುತ್ ಉಳಿತಾಯ ಮಾಡುವ ಉಪಕರಣಗಳನ್ನು ಅಳವಡಿಸಲಾಗಿದೆ.
ಇದರ ಜತೆಗೆ ಕಟ್ಟಡದ ಹೊರಭಾಗಕ್ಕೆ ಸ್ಮಾರ್ಟ್‌ಫೋಟೋ ಕ್ರೋಮಿಕ್ ಗ್ಲಾಸ್ ಅಳವಡಿಸಲಾಗಿದೆ. ಇದರಿಂದಾಗಿ ಇಡೀ ಕಟ್ಟಡವನ್ನು ಎಲ್‌ಇಡಿ ಬಲ್ಟ್ ಮೂಲಕ ಬೆಳಗಬಹುದು, ವಿಶೇಷ ಸಂದೇಶಗಳನ್ನು ನೀಡಬಹುದು. ಹಾಗೆಯೇ ಇದು ಹೊರಗಿನ ಉಷ್ಣತೆ ಯನ್ನು ತಡೆದು ಕಟ್ಟಡದೊಳಗಿನ ಉಷ್ಣತೆ ಯನ್ನು ಸದಾ ಕಾಪಾಡಿಕೊಳ್ಳುತ್ತದೆ. ಈ ಸ್ಮಾರ್ಟ್ ಗ್ಲಾಸ್‌ಗೆ ನಾವೇ ಬೆಳಕಿನ ವ್ಯವಸ್ಥೆ ಮಾಡಿದ್ದು ಎಂದು ರಾಜೇಶ್ ಶೆಟ್ಟಿ ಹೇಳುತ್ತಾರೆ.




