ಬೆಂಗಳೂರು: ಕಮಲ್ ಹಾಸನ್ ನಟನೆಯ ‘ಥಗ್ ಲೈಫ್ ‘ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ಗೆ ಭದ್ರತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜೂ. 10 ಕ್ಕೆ ಮುಂದೂಡಿಕೆ ಮಾಡಿದೆ.

ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಪೀಠವು ನಿರ್ಮಾಪಕ ಹೇಳಿಕೆ ದಾಖಲಿಸಿಕೊಂಡಿದ್ದು, ವಿವೇಚನೆ ಬಳಸಿ ಎಂದು ಕಿವಿಮಾತು ಹೇಳಿತು. ಆದರೆ, ನಿರ್ಮಾಪಕರ ಮಂಡಳಿಯು ಕರ್ನಾಟಕದಲ್ಲಿ ಸದ್ಯಕ್ಕೆ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದೆ. ಈ ಮೂಲಕ ಕೋರ್ಟ್ನಿಂದ ವಿಚಾರಣೆ ನಡೆದು ತೀರ್ಪು ಬರುವವರೆಗೂ ರಾಜ್ಯದಲ್ಲಿ ಸಿನಿಮಾ ಬಿಡುಗಡೆಯಾಗುವುದಿಲ್ಲ.
ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ನಟ ಕಮಲ್ ಹಾಸನ್ ಹೇಳಿಕೆ ನೀಡಿದ್ದರು. ಇದಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅವರ ಥಗ್ ಲೈಫ್ ಸಿನಿಮಾ ಬಿಡುಗಡೆ ಮಾಡದಂತೆ ಕನ್ನಡ ಪರ ಸಂಘಟನೆಗಳಿಂದ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆ ನಟ ಕಮಲ್ ಸರ್ಕಾರವು ಸಿನಿಮಾ ಬಿಡುಗಡೆ ಭದ್ರತೆ ನೀಡಬೇಕು ಎಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
ಕ್ಷಮೆ ಕೇಳಿ ಎಂದಿದ್ದ ಹೈಕೋರ್ಟ್
ಕಮಲ್ ಹಾಸನ ಅವರು ಇತಿಹಾಸಕಾರರು ಅಲ್ಲ ಎಂದ ಮೇಲೆ ನೀಡಿದ ಹೇಳಿಕೆಗೆ ಕ್ಷಮೆ ಕೋರುವಂತೆ ಹೈಕೋರ್ಟ್ ಸೂಚನೆ ನೀಡಿ ಬೆಳ್ಳಿಯ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿತ್ತು. ಮಧ್ಯಾಹ್ನದ ಬಳಿಕ ವಿಚಾರಣೆ ಆರಂಭವಾದಾಗ ನಟನ ಪರ ವಕೀಲ ಧ್ಯಾನ್ ಚಿನ್ನಪ್ಪ ಪೀಠದ ಭಾವನೆಗಳನ್ನು ಕಮಲ್ ಹಾಸನ್ ಅವರಿಗೆ ತಿಳಿಸಿದ್ದೇನೆ. ಮೆರಿಟ್ ಮೇಲೆ ವಾದಿಸಲಾಗುವುದು ಎಂದು ಕರ್ನಾಟಕ ವಾಣಿಜ್ಯ ಮಂಡಳಿಗೆ ನಟ ಬರೆದ ಪತ್ರವನ್ನು ಓದಿ ಕೋರ್ಟ್ಗೆ ಹೇಳಿದರು.
ವಕೀಲರ ಓದಿದ ಪತ್ರವನ್ನು ಕೇಳಿಸಿಕೊಂಡ ನ್ಯಾಯಮೂರ್ತಿಗಳು, ” ಎಲ್ಲವೂ ಸರಿಯಾಗಿದೆ. ಇದರ ಜೊತೆಗೆ ಯಾರ ಭಾವನೆಗಾದರೂ ನಾನು ನೋವು ಉಂಟು ಮಾಡಿದ್ದರೆ.. ಎಂದು ಹೇಳಿದ್ದರೆ ಸರಿಯಾಗಿರುತ್ತಿತ್ತು” ಎಂದರು.




