ಸರಕಾರ ವಿರುದ್ಧ ಜನಾಕ್ರೋಶ ತಪ್ಪಿಸಲು ನಮ್ಮನ್ನು ಹರ್ಕೆ ಕುರಿ ಮಾಡಲಾಗಿದೆ :KSCA

Share with

ಬೆಂಗಳೂರು: ಆರ್‌ಸಿಬಿ ಅಭಿಮಾನಿಗಳು ಕಾಲ್ತುಳಿತಕ್ಕೆ ಬಲಿಯಾಗಿರುವ ಘಟನೆಯಿಂದಾಗಿ ಸರಕಾರದ ಮುಖ್ಯಸ್ಥರು, ಕೆಲವು ಸಚಿವರ ವಿರುದ್ಧ ಸೃಷ್ಟಿಯಾಗಿರುವ ಜನಾಕ್ರೋಶವನ್ನು ಬೇರೆಡೆಗೆ ತಿರುಗಿಸಲು ಹರಕೆಯ ಕುರಿಯನ್ನು ಹುಡುಕುತ್ತಿರುವ ಸರಕಾರ ನಮ್ಮ ವಿರುದ್ಧ ಎಫ್‌ಐಆ‌ರ್ ದಾಖಲಿಸಿದೆ. ಪ್ರಾಥಮಿಕ ತನಿಖೆಯನ್ನು ನಡೆಸದೆ ಪೊಲೀಸರು ಒತ್ತಡಕ್ಕೆ ಸಿಲುಕಿ ನಮ್ಮ ವಿರುದ್ಧ ಎಫ್‌ಐಆ‌ರ್ ದಾಖಲಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯ ಪದಾಧಿಕಾರಿಗಳು ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ದೂರಿದ್ದಾರೆ.

ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ. ಶಂಕ‌ರ್, ಖಜಾಂಜಿ ಇ. ಎಸ್. ಜಯರಾಂ, ಕೆಎಸ್‌ಸಿಎ ನಿರ್ವಹಣಾ ಸಮಿತಿಯು ಕಾಲುತುಳಿತ ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್‌ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ಆನಂತರದ ನ್ಯಾಯಾಂಗ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಈ ಆರೋಪ ಮಾಡಿದ್ದಾರೆ.

ಕಾಲ್ತುಳಿತ ಪ್ರಕರಣವನ್ನು ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿದೆ. ಹೀಗಾಗಿ ಅದರ ಹಿಂದೆಯೇ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಆರ್‌ಸಿಬಿ ವಿಜಯವನ್ನು ಆಚರಿಸುವುದಕ್ಕೆ ಸರಕಾರವೇ ಕರೆ ನೀಡಿದ್ದು, ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಆಟಗಾರರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿ ಮಂಡಲದ ಸದಸ್ಯರು ಹಾಗೂ ಅಧಿಕಾರಿಗಳು ಸಮ್ಮಾನಿಸಿದ್ದಾರೆ. ಜನರನ್ನು ನಿಯಂತ್ರಿಸಬೇಕಾಗಿದ್ದು ಆರ್‌ಸಿಬಿ, ಕಾರ್ಯಕ್ರಮ ಸಂಘಟಕರು ಮತ್ತು ಪೊಲೀಸರ ಕರ್ತವ್ಯ. ಇದಕ್ಕೆ ಕೆಎಸ್‌ಸಿಎ ಜವಾಬ್ದಾರನಲ್ಲ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣವನ್ನು ಕೆಎಸ್‌ಸಿಎಯು ನಿರ್ವಹಿಸುತ್ತದೆ. ಆದರೆ ಐಪಿಎಲ್ ಕೂಟವನ್ನು ಆರ್‌ಸಿಬಿಯೂ ತನ್ನ ಸೇವಾ ಪೂರೈಕೆದಾರ ಡಿಎನ್‌ಎ ನೆಟ್‌ವರ್ಕ್ ಪ್ರೈ. ಲಿ. ಮೂಲಕ ಆಯೋಜಿಸುತ್ತದೆ. ಇದರಲ್ಲಿ ಕೆಎಸ್‌ಸಿಎ ಪಾತ್ರವು ಕ್ರೀಡಾಂಗಣ ಮತ್ತದರ ಮೂಲ ಸೌಕರ್ಯವನ್ನು ನೀಡುವುದಷ್ಟೆ. ಟಿಕೆಟಿಂಗ್ ಮತ್ತು ಗೇಟ್ ನಿರ್ವಹಣೆಯ ಹೊಣೆಯನ್ನು ಆರ್‌ಸಿಬಿಯೇ ನಿರ್ವಹಿಸಿದೆ. ಟಿಕೆಟ್ ಮೂಲಕ ಸಂಗ್ರಹಿಸಿದ ಹಣ ಆರ್‌ಸಿಬಿಗೆಯೇ ಸಲ್ಲುತ್ತದೆ. ಕೆಎಸ್‌ಸಿಎ ಬಾಡಿಗೆ ಮಾತ್ರ ಪಡೆಯುತ್ತದೆ. ಆದ್ದರಿಂದ ಈ ದುರ್ಘಟನೆಯ ಹೊಣೆ ಹೊರಿಸಿ ಕೆಎಸ್‌ಸಿಎ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸಿರುವುದು ಆಕ್ಷೇಪಾರ್ಹ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಬೆಂಗಳೂರು ಪೊಲೀಸ್ ಆಯುಕ್ತರು ಸಹಿತ ಐವರು ಅಧಿಕಾರಿಗಳನ್ನು ಅಮಾನತು ಮಾಡಿರುವುದು ಸಂಪೂರ್ಣವಾಗಿ ಪೊಲೀಸ್ ಇಲಾಖೆಯ ವೈಫಲ್ಯವನ್ನು ಎತ್ತಿ ತೋರುತ್ತದೆ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.


Share with

Leave a Reply

Your email address will not be published. Required fields are marked *