ಆ.15ರಿಂದ ದೇಗುಲಗಳಲ್ಲಿ ಪ್ಲಾಸ್ಟಿಕ್ ನಿಷೇಧ; ಸಚಿವ ರಾಮಲಿಂಗಾರೆಡ್ಡಿ

Share with

ಬೆಂಗಳೂರು: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು ಆಗಸ್ಟ್ 15ರವರೆಗೆ ದೇವಸ್ಥಾನ ಹಾಗೂ ದೇವಸ್ಥಾನದ ಜಾಗದಲ್ಲಿ ಅಂಗಡಿ-ಮಳಿಗೆ ಸ್ಥಾಪಿಸಿರುವವರಿಗೆ ಗಡುವು ನೀಡಲಾಗಿದೆ. ಆ.15ರ ಬಳಿಕ ದೇಗುಲಗಳಲ್ಲಿ ಪ್ಲಾಸ್ಟಿಕ್ ಬಳಸುವಂತಿಲ್ಲ ಎಂದು ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯಗಳ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಸೋಮವಾರ ವಿಕಾಸಸೌಧದಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು,ಇನ್ನು ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಹಿಂದೆಯೇ ಮಾಹಿತಿ ನೀಡಲಾಗಿತ್ತು. ಕೆಲ ದೇವಸ್ಥಾನಗಳ ಜಾಗದಲ್ಲೇ ಅಂಗಡಿ-ಮಳಿಗೆಗಳಿದ್ದು ಅಲ್ಲಿನ ವ್ಯಾಪಾರಿಗಳಿಗೂ ಪ್ಲಾಸ್ಟಿಕ್ ಮಾರಾಟ ಮಾಡದಂತೆ ಸೂಚಿಸಿತ್ತು. ಪ್ಲಾಸ್ಟಿಕ್ ನಿಷೇಧಕ್ಕೆ ಆಗಸ್ಟ್ 15 ರವರೆಗೆ ಕಾಲಾವಕಾಶ ನೀಡಿದ್ದು, ಅಷ್ಟರಲ್ಲಿ ಪರ್ಯಾಯ ವ್ಯವಸ್ಥೆಯನ್ನು ದೇವಸ್ಥಾನಗಳು ಹಾಗೂ ಅಂಗಡಿ-ಮಳಿಗೆಯವರು ಮಾಡಿಕೊಳ್ಳಬೇಕು. ಆಗಸ್ಟ್ 15ರ ನಂತರ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದರು.

ತಸ್ತೀಕ್ ಹಣ ನೇರ ಖಾತೆಗೆ:

45,915 ಮುಜರಾಯಿ ದೇವಸ್ಥಾನಗಳಲ್ಲಿ 20 ಸಾವಿರ ಅರ್ಚಕರಿದ್ದು 14 ಸಾವಿರ ಅರ್ಚಕರಿಗೆ ಮಾತ್ರ ಡಿಬಿಟಿ ಮೂಲಕ ತಸ್ತೀಕ್ ಹಣ ತಲುಪುತ್ತಿದೆ. ಇನ್ನೂ 6 ಸಾವಿರ ಅರ್ಚಕರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಸೇರಿದಂತೆ ಇತರ ಮಾಹಿತಿ ಒದಗಿಸಿಲ್ಲ. ಹೀಗಾಗಿ ದೇವಸ್ಥಾನಗಳ ಖಾತೆಗೇ ಜಮೆ ಮಾಡುತ್ತಿದ್ದು, ಅರ್ಚಕರ ಸಂಬಳ, ಪೂಜೆಗೆ ಬೇಕಾದ ವ್ಯವಸ್ಥೆಯನ್ನು ಆ ಹಣದಲ್ಲಿ ಮಾಡಿಕೊಳ್ಳುತ್ತಿದ್ದಾರೆ. ಬಾಕಿ ಇರುವ ಅರ್ಚಕರು ಸೂಕ್ತ ದಾಖಲೆಗಳನ್ನು ಒದಗಿಸಿದರೆ ಅವರ ಖಾತೆಗೇ ನೇರ ಜಮೆ ಆಗುತ್ತದೆ ಎಂದರು.

ಧಾರ್ಮಿಕ ಪರಿಷತ್, ಆರಾಧನಾ ಸಮಿತಿ ರಚನೆ:

ಎಲ್ಲ ಮುಜರಾಯಿ ದೇವಸ್ಥಾನಗಳ ಅಧೀನದಲ್ಲಿರುವ ವಸತಿಗೃಹಗಳ 3 ಸಾವಿರ ಕೊಠಡಿಗಳನ್ನು ಆನ್‌ಲೈನ್‌ನಲ್ಲೇ ಕಾಯ್ದಿರಿಸುವ ವ್ಯವಸ್ಥೆ ಮಾಡಿದ್ದು, ಇನ್ನು ಮುಂದೆ ಇದೇ ವ್ಯವಸ್ಥೆ ಮುಂದುವರಿಯಲಿದೆ. ಇನ್ನು ರಾಜ್ಯದ 31 ಜಿಲ್ಲೆಗಳ ಪೈಕಿ 8 ಜಿಲ್ಲೆಗಳಲ್ಲಿ ಮಾತ್ರ ಧಾರ್ಮಿಕ ಪರಿಷತ್‌ ರಚನೆ ಆಗಿದ್ದು, 224 ವಿಧಾನಸಭಾ ಕ್ಷೇತ್ರಗಳ ಪೈಕಿ 102 ಕ್ಷೇತ್ರಗಳಲ್ಲಿ ಮಾತ್ರ ಆರಾಧನಾ ಸಮಿತಿ ರಚನೆಯಾಗಿದೆ. ಇನ್ನೂ 23 ಕಡೆ ಜಿಲ್ಲಾ ಧಾರ್ಮಿಕ ಪರಿಷತ್ ಮತ್ತು 122 ತಾಲೂಕುಗಳಲ್ಲಿ ಆರಾಧನಾ ಸಮಿತಿ ರಚನೆ ಆಗಬೇಕಿದೆ. ಸಾಧ್ಯ ಆದಷ್ಟು ಬೇಗ ಎರಡನ್ನೂ ರಚಿಸುವಂತೆ ಸೂಚನೆ ನೀಡಲಾಗಿದೆ ಎಂದರು.

1,253 ದೇಗುಲಗಳ ಮಾಹಿತಿ ಸಂಗ್ರಹ

ಮುಜರಾಯಿ ಇಲಾಖೆಯಲ್ಲಿ ಇಷ್ಟು ದಿನ ಇದ್ದ 34,565 ಅಧಿಸೂಚಿತ ದೇವಾಲಯಗಳ ಪೈಕಿ 31,095 ದೇವಾಲಯಗಳ ಬಗ್ಗೆ ಮಾತ್ರ ಮಾಹಿತಿ ಇತ್ತು. ಇನ್ನುಳಿದ 3,470 ದೇವಸ್ಥಾನಗಳ ಬಗ್ಗೆ ಮಾಹಿತಿಯೇ ಲಭ್ಯವಿರಲಿಲ್ಲ. ಕಳೆದ 3 ತಿಂಗಳಲ್ಲಿ 1,253 ದೇಗುಲಗಳ ಮಾಹಿತಿ ಸಂಗ್ರಹಿಸಿದ್ದು, ಒಟ್ಟು 45,915 ದೇವಾಲಯಗಳನ್ನು ಅಧಿಸೂಚಿಸಲಾಗಿದೆ ಎಂದು ಸಚಿವರು ಹೇಳಿದರು. ಆದರೆ, 18,976 ದೇವಸ್ಥಾನಗಳ ಖಾತೆ ಆಗಿದ್ದು 26,939 ದೇವಸ್ಥಾನಗಳಿಗೆ ಖಾತೆಯೇ ಆಗಿಲ್ಲ. ದೇವಸ್ಥಾನಗಳಿಗೆ ಸೇರಿದ 15 ಸಾವಿರ ಎಕರೆ ಮಾತ್ರ ಇಂಡೀಕರಣ ಆಗಿದ್ದು ಬಾಕಿ ಇರುವ 20 ಸಾವಿರ ಎಕರೆಯನ್ನೂ ಇಂಡೀಕರಣ ಮಾಡಲು ಸೂಚಿಸಲಾಗಿದೆ. ಮೂರು ತಿಂಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಳಿಸಿ, ಅಧಿಸೂಚಿಸಲು ತಿಳಿಸಲಾಗಿದೆ ಎಂದರು.


Share with

Leave a Reply

Your email address will not be published. Required fields are marked *