ಸಂಭಾವ್ಯ ಮಳೆ ಅನಾಹುತ ಪ್ರದೇಶಗಳನ್ನು ಗುರುತಿಸಿ: ದ.ಕ ಜಿಲ್ಲಾಧಿಕಾರಿ ಸೂಚನೆ

Share with

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪಗಳಿಂದ ಅಪಾಯದ ಸಾಧ್ಯತೆ ಇರುವ ಪ್ರದೇಶಗಳನ್ನು ಮುಂದಿನ ಎರಡು ದಿನಗಳಲ್ಲಿ ಗುರುತಿಸಿ ವರದಿ ನೀಡಲು ಜಿಲ್ಲಾಧಿಕಾರಿ ಮು ಮುಗಿಲನ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಭೂಕುಸಿತ, ಕೃತಕ ನೆರೆ ಸೇರಿದಂತೆ ತೀವ್ರ ಮಳೆಯಿಂದಾಗಿ ದುರಂತ ಘಟನೆಗಳು ನಡೆಯುವ ಸಾಧ್ಯತೆ ಇರುವ ಪ್ರದೇಶಗಳನ್ನು ಮೊದಲೇ ಗುರುತಿಸಬೇಕು. ರೆಡ್ ಅಲರ್ಟ್ ಅವ ಧಿಯಲ್ಲಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಅಪಾಯಗಳ ಬಗ್ಗೆ ಅಲ್ಲಿನ ನಿವಾಸಿಗಳಿಗೆ ನೋಟಿಸ್‌ ನೀಡಬೇಕು. ಸಂಭಾವ್ಯ ಭೂಕುಸಿತ ಅನಾಹುತ ಸ್ಥಳಗಳನ್ನು ಗುರುತಿಸದೆ ಅನಾಹುತ ಸಂಭವಿಸಿದರೆ ಆಯಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನು ಜವಾಬ್ದಾರರಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಸ್ಥಳೀಯ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ರಚಿಸಬೇಕು. ಸಂಬಂಧಪಟ್ಟ ತಹಶೀಲ್ದಾರ್ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಧಿಕಾರಿಗಳು ಪರಿಶೀಲಿಸಬೇಕು ಎಂದು ತಿಳಿಸಿದ ಅವರು, ಪ್ರಾಕೃತಿಕ ದುರಂತದಲ್ಲಿ ನಡೆಯುವ ಜೀವಹಾನಿ ತಪ್ಪಿಸುವುದೇ ಮೊದಲ ಆದ್ಯತೆ. ಪ್ರಮುಖವಾಗಿ ಜನವಸತಿ ಪ್ರದೇಶ ಮತ್ತು ಮನೆಗಳಲ್ಲಿ ವಾಸಿಸುವ ಸಾರ್ವಜನಿಕರ ರಕ್ಷಣೆ ಪ್ರಮುಖ ಗುರಿ. ಈ ನಿಟ್ಟಿನಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಪ್ರತಿಯೊಂದು ಪ್ರದೇಶಕ್ಕೆ ಭೇಟಿ ನೀಡಿ ಸ್ಕೂಲವಾಗಿ ಪರಿಶೀಲಿಸಬೇಕು. ಪ್ರತಿ ಗ್ರಾ.ಪಂ ವ್ಯಾಪ್ತಿ ಹಾಗೂ ನಗರ ಪ.ಪಂ ನ ಪ್ರತಿ ವಾರ್ಡು ವ್ಯಾಪ್ತಿಯಲ್ಲಿ ಪರಿಶೀಲಿಸಿ ವಿಪತ್ತು ನಿರ್ವಹಣೆ ಯೋಜನೆ ತಯಾರಿಸುವಂತೆ ಸೂಚಿಸಿದರು.

ಗುಡ್ಡ ಕಡಿದು ಮನೆ ನಿರ್ಮಿಸುವುದು ಅಪಾಯಕಾರಿಯಾಗಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಪ್ರಾಕೃತಿಕ ನೀರಿನ ಹರಿವನ್ನು ತಿರುಗಿಸುವುದೂ ಪ್ರಾಕೃತಿಕ ದುರಂತಗಳಿಗೆ ಕಾರಣವಾಗಬಲ್ಲದು. ಪ್ರತಿ ಶಾಲಾ ಕಟ್ಟಡಗಳು ಸುಸ್ಥಿತಿಯಲ್ಲಿರುವ ಬಗ್ಗೆ ಸಂಬಂಧಪಟ್ಟ ಮುಖ್ಯೋಪಾಧ್ಯಾಯರಿಂದ ವರದಿ ಪಡೆಯಬೇಕು. ಅಂಗನವಾಡಿ ಕಟ್ಟಡಗಳ ಕ್ಷಮತೆಯನ್ನು ಪರಿಶೀಲಿಸಬೇಕು

ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಕೆತ್ತಿಕಲ್‌ನಲ್ಲಿ ಭೂಕುಸಿತ ತಡೆಯುವ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿಗೆ ಕೇಂದ್ರದಿಂದ ಅನುಮೋದನೆ ಸಿಕ್ಕಿದ್ದು ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ನಾಳೆ ವರದಿ ನೀಡದಿದ್ದರೆ ಕ್ರಮ

ಮಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತ ಇರುವ ಜನವಸತಿ ಪ್ರದೇಶಗಳಿಗೆ ವಿಮಾನ ನಿಲ್ದಾಣದಿಂದ ಮಳೆ ನೀರು ಹರಿದು ಹೋಗಿ ಸಮಸ್ಯೆಯಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ಒಂದು ವರ್ಷ ಮೊದಲೇ ತಿಳಿಸಲಾಗಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ನಾಳೆ ಮಧ್ಯಾಹ್ನದೊಳಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವರದಿ ನೀಡಬೇಕು.

ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ತೀವ್ರ ಗಾಳಿ ಮಳೆ ಸಂದರ್ಭದಲ್ಲಿ ಮೀನುಗಾರಿಕೆಗೆ ತೆರಳಿದ ದೋಣಿಗಳು ಎನ್.ಎಂ.ಪಿ.ಟಿ ಬಂದರು ಪ್ರವೇಶಿಸುವ ಕುರಿತು ಎನ್‌.ಎಂ.ಪಿ.ಎ ಮತ್ತು ಮೀನುಗಾರಿಕೆ ಇಲಾಖೆ ಜಂಟಿಯಾಗಿ ಸೂಕ್ತ ಕಾರ್ಯವಿಧಾನ ರೂಪಿಸುವಂತೆ ಅವರು ಸೂಚಿಸಿದರು.

ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್‌ ಕೆ. ಮಾತನಾಡಿ, ಪ್ರಾಕೃತಿಕ ದುರಂತಗಳ ಅನಂತರ ಸಂತ್ರಸ್ತರನ್ನು ಸ್ಥಳಾಂತರಿಸುವ ಬದಲು, ರೆಡ್ ಅಲರ್ಟ್ ಸಮಯದಲ್ಲಿಯೇ ಸಂಭಾವ್ಯ ಅನಾಹುತಗಳ ಪ್ರದೇಶದಲ್ಲಿ ನಾಗರಿಕರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಅಂತಹ ಸ್ಥಳಗಳ ಮನೆಗಳಿಗೆ ನೋಟಿಸ್‌ ಕೊಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ., ಉಪ ಅರಣ್ಯ ಸಂರಕ್ಷಣಾ ಧಿಕಾರಿ ಆ್ಯಂಟನಿ ಮರಿಯಪ್ಪ, ಉಪ ಪೊಲೀಸ್‌ ಆಯುಕ್ತ ಸಿದ್ದಾರ್ಥ್ ಗೋಯಲ್ ಮತ್ತಿತರರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *