ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಯುವಕನ ರಕ್ಷಣೆ; ಸಂದೀಪ್ ಅವರಿಗೆ ಆಸರೆಯಾದ ಶಾಸಕ ಸುನಿಲ್

Share with

ಕಾರ್ಕಳ: ಉದ್ಯೋಗ ನಿಮಿತ್ತ ದುಬೈಗೆ ತೆರಳಿದ್ದ ತೆಳ್ಳಾರು ನಿವಾಸಿ ಸಂದೀಪ್ ಅವರು ಅಲ್ಲಿನ ಸರಕಾರದ ದಿಗ್ಟಂಧನದಿಂದಾಗಿ ಆರು ವರ್ಷಗಳ ಕಾಲ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಮಗನ ಕುರಿತು ಕಂಗೆಟ್ಟಿದ್ದ ಅವರ ತಾಯಿ ಸುನಂದಾ ಅವರು ಕಳೆದ ಆರು ತಿಂಗಳ ಹಿಂದೆ ಶಾಸಕ ವಿ. ಸುನಿಲ್ ಕುಮಾರ್ ಅವರ ಗಮನಕ್ಕೆ ಈ ವಿಷಯ ತಂದಿದ್ದರು. ಮಗನ ಸಂಕಷ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿ, ಮನೆಗೆ ಕರೆತರಲು ಸಹಕಾರ ನೀಡುವಂತೆ ಮನವಿ ಮಾಡಿದ್ದರು.

ಶಾಸಕ ಸುನಿಲ್ ಕುಮಾರ್ ಅವರು ದುಬೈನಲ್ಲಿ ನೆಲೆಸಿರುವ ಸ್ನೇಹಿತ ಪ್ರತಾಪ್ ಶೆಟ್ಟಿ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದರು. ಅಲ್ಲಿನ ಸರಕಾರ ವಿಧಿಸಿದ್ದ ದಂಡದ ವಿಚಾರ ತಿಳಿದುಕೊಂಡು ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿದರು. ಅಲ್ಲಿನ ಸರಕಾರಕ್ಕೆ ಕಟ್ಟಬೇಕಿದ್ದ ಹಣವನ್ನು ಕಡಿತಗೊಳಿಸಿ, ಉಳಿದ ಮೊತ್ತವನ್ನು ಶಾಸಕರು ಪಾವತಿಸಿ, ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದರು. ನಿರ್ಬಂಧ ಮತ್ತು ಇತರೆ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಅನಂತರ, ಸಂದೀಪ್ ಯಶಸ್ವಿಯಾಗಿ ತಾಯ್ಕಾಡಿಗೆ ವಾಪಸಾಗಿದ್ದಾರೆ.

ಮೋಸ ಹೋಗಿದ್ದ ಸಂದೀಪ್ ಅವರಿಗೆ ಆಸರೆಯಾದ ಶಾಸಕರು

ತಾನು ಮಂಗಳೂರು ಶಕ್ತಿನಗರದ ವ್ಯಕ್ತಿಯೊಬ್ಬರಿಂದ ಮೋಸ ಹೋಗಿದ್ದು, ಆತನಿಂದಲೇ ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದೆ ಎಂದು ವಿವರಿಸಿದ್ದಾರೆ.

“ನಂಬಿಕೆಯಿಂದ ವೀಸಾ ಐಡಿ ಕೊಟ್ಟು ತೊಂದರೆ ಎದುರಿಸಬೇಕಾಯಿತು. ಅಲ್ಲಿನ ಸರಕಾರ ನನಗೆ ದಂಡ ವಿಧಿಸಿತ್ತು. ಅಷ್ಟು ಆರ್ಥಿಕ ಶಕ್ತಿ ನನಗಿರಲಿಲ್ಲ. ಆಗ ನಾನು ನೆರವಿಗಾಗಿ ಹಲವರನ್ನು ಕೇಳಿಕೊಂಡೆ. ಆದರೆ, ಯಾರೂ ಸಹಾಯ ಮಾಡದೆ ಇದ್ದಾಗ ತುಂಬಾ ಕಂಗಾಲಾಗಿದ್ದೆ. ಆಗ ಶಾಸಕ ಸುನಿಲ್ ಕುಮಾ‌ರ್ ನನ್ನನ್ನು ಸುರಕ್ಷಿತವಾಗಿ ಮರಳಿ ಮನೆಗೆ ಕರೆತರಲು ಸಹಕರಿಸಿದರು. ಶಾಸಕರ ಸ್ಪಂದನೆ, ದುಬೈಯಲ್ಲಿರುವ ಪ್ರತಾಪ್ ಶೆಟ್ಟಿ ಅವರ ಸಹಕಾರದಿಂದ ಮರಳಿ ಊರಿಗೆ ಬರಲು ಸಾಧ್ಯವಾಯಿತು” ಎಂದು ಸಂದೀಪ್ ಹೇಳಿದ್ದಾರೆ.


Share with

Leave a Reply

Your email address will not be published. Required fields are marked *