ಬೆಂಗಳೂರು: ಕನ್ನಡದ ಜನಪ್ರಿಯ ಶೋ ‘ಮಹಾನಟಿ ಸೀಸನ್ -2’ (Mahanati Season-2) ಭಾನುವಾರ(3.9) ಮುಕ್ತಾಯ ಕಂಡಿದೆ. ಅದ್ಧೂರಿ ಫಿನಾಲೆಯಲ್ಲಿ ವಿಜೇತರನ್ನು ಘೋಷಿಸಲಾಗಿದೆ.


ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ಮಹಾನಟಿ ಸೀಸನ್ 2’ನ ವಿಜೇತರಾಗಿ ಮಂಗಳೂರು ಮೂಲದ ವಂಶಿ ಹೊರ ಹೊಮ್ಮಿದ್ದಾರೆ.
ವಂಶಿ ಈ ಸೀಸನ್ನಲ್ಲಿ ತನ್ನ ನಟನಾ ಪ್ರತಿಭೆಯ ಮೂಲಕ ವೀಕ್ಷಕರ ಮನಗೆದ್ದಿದ್ದರು. ಬೆಳಗಾವಿಯ ವರ್ಷಾ ಡಿಗ್ರಜೆ ಅವರು ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
‘ಮಹಾನಟಿ’ಯ ಕಿರೀಟದ ಸಿಕ್ಕ ಬಳಿಕ ವೇದಿಕೆಯಲ್ಲಿ ವಂಶಿ, ‘ತುಂಬಾ ಖುಷಿ ಆಗುತ್ತಿದೆ. ಬಿ ಸರೋಜಾ ದೇವಿ ಅವರನ್ನು ನೋಡಿಲ್ಲ ನಾನು. ಆದರೆ, ಅವರ ನಟನೆಯನ್ನು ನೋಡಿಕೊಂಡು ಬಂದಿದ್ದೇನೆ. ಈ ಟ್ರೋಫಿ ಮೂಲಕ ಅವರ ಆಶೀರ್ವಾದ ನನಗಿದೆ.
ನಟಿ ಆಗಬೇಕು ಎಂಬ ಕನಸು ಕಂಡ ನನಗೆ ಇದು ಸಣ್ಣ ಹೆಜ್ಜೆ’ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಟಾಪ್ 5 ಫೈನಲಿಸ್ಟ್ ಆಗಿ ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಾಕರ್, ಶ್ರೀಯ ಅಗಮ್ಯ ಹಾಗೂ ಭೂಮಿಕೆ ಆಯ್ಕೆ ಆಗಿದ್ದರು.
ಸಿಕ್ಕ ಬಹುಮಾನವೆಷ್ಟು?
ಮಂಗಳೂರಿನ ವಂಶಿ ರತ್ನಾಕರ್ ಅವರಿಗೆ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ನೀಡಲಾಗಿದೆ. ರನ್ನರ್ ಅಪ್ ವರ್ಷಾ ಅವರಿಗೆ 10 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ.
ಎರಡನೇ ರನ್ನರ್ ಅಪ್ ಮೈಸೂರಿನ ಶ್ರೀ ಅಗಮ್ಯ ಅವರಿಗೆ 7 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ. ರಮೇಶ್ ಅರವಿಂದ್, ನಿಶ್ವಿಕಾ ನಾಯ್ಡು, ತರುಣ್ ಸುಧೀರ್ ಅವರು ಈ ಸೀಸನ್ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.




