ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ (ನ.28) ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಇದರ ಬಗ್ಗೆ ಪ್ರಧಾನಿ ಮೋದಿ ಅವರು ಟ್ವಿಟ್ ಪೋಸ್ಟ್ ಮಾಡಿದ್ದಾರೆ.

“ನಾಳೆ ನವೆಂಬರ್ 28 ರಂದು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಭೇಟಿ ನೀಡುತ್ತಿರುವುದು ನನಗೆ ಗೌರವ ತಂದಿದೆ. ಗೀತೆಯ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಟ್ಟುಗೂಡಿಸುವ ವಿಶೇಷ ಸಭೆ ಇದಾಗಿದೆ. ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಬಹಳ ವಿಶೇಷ ಮಹತ್ವ ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾಗಿ, ಸಮಾಜ ಸೇವೆ ಮಾಡುವಲ್ಲಿ ಮುಂಚೂಣಿಯಲ್ಲಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿ ಮೋದಿ ಅವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದು ಅಲ್ಲಿ ವಿದ್ಯಾರ್ಥಿಗಳು, ಸಾಧು-ಸಂತರು, ವಿದ್ವಾಂಸರು ಮತ್ತು ವಿವಿಧ ವರ್ಗಗಳ ನಾಗರಿಕರು ಸೇರಿದಂತೆ 100,000 ಮಂದಿ ಭಾಗವಹಿಸುವ ‘ಲಕ್ಷ ಕಂಠ ಗೀತಾ ಪಾರಾಯಣ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶ್ರೀಮದ್ ಭಗವದ್ಗೀತೆಯ ಸಾಮೂಹಿಕ ಪಾರಾಯಣಕ್ಕೆ ಪ್ರಧಾನಮಂತ್ರಿ ಸಾಕ್ಷಿಯಾಗಲಿದ್ದಾರೆ.
ಇದೇ ಸಮಯದಲ್ಲಿ ಶ್ರೀ ಕೃಷ್ಣ ದೇಗುಲದ ಗರ್ಭಗುಡಿಯ ಮುಂಭಾಗದಲ್ಲಿರುವ ‘ಸುವರ್ಣ ತೀರ್ಥ ಮಂಟಪ’ವನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ, ಕನಕದಾಸರು ಭಗವಾನ್ ಶ್ರೀಕೃಷ್ಣನ ದಿವ್ಯ ದರ್ಶನವನ್ನು ಪಡೆದ ಸ್ಥಳವಾದ ‘ಕನಕನ ಕಿಂಡಿ’ಗೆ ಕನಕ ಕವಚವನ್ನು ಸಮರ್ಪಿಸಲಿದ್ದಾರೆ.




