ಪುತ್ತೂರು: ಸಂಪ್ಯದಲ್ಲಿ 2019ರ ಸೆ. 3ರಂದು ಗಣೇಶೋತ್ಸವ ಸಂದರ್ಭ ಪುತ್ತೂರು ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲ (27) ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಅಪರಾಧಿಗಳೆಂದು ಸಾಬೀತು ಆಗಿದ್ದು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ರೂ. ದಂಡವನ್ನು ವಿಧಿಸಿ ಆದೇಶ ನೀಡಿದೆ.
ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು, ಅದರಲ್ಲಿ ಉಳ್ಳಾಲದ ಪ್ರೀತೇಶ್ ಶೆಟ್ಟಿ ಹಾಗೂ ಸಂಪ್ಯದ ಕಿರಣ್ ರೈ ಶಿಕ್ಷೆಗೊಳಪಟ್ಟಿದ್ದಾರೆ. ಪ್ರಕರಣದ 2ನೇ ಆರೋಪಿ ಚರಣ್ ರಾಜ್ ರೈ 2022ರ ಜೂ. 4ರಂದು ಕೊಲೆಯಾಗಿದ್ದರು. ಪ್ರಕರಣದ 4ನೇ ಆರೋಪಿ ಮಂಗಳೂರು ಅತ್ತಾವರದ ಸ್ಟೀವನ್ ಮೊಂತೇರೊ ಅವರ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನನ್ನು ಖುಲಾಸೆಗೊಳಿಸಿದೆ.
ಶಿಕ್ಷೆಗೊಳಪಟ್ಟ ಆರೋಪಿಗಳ ದಂಡದ ಮೊತ್ತದಲ್ಲಿ 5.90 ಲಕ್ಷ ರೂ.ಗಳನ್ನು ಕಾರ್ತಿಕ್ ಮೇರ್ಲ ಅವರ ತಾಯಿಗೆ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಜತೆಗೆ ಕಾಯ್ದೆ 341ಕ್ಕೆ ಸಂಬಂಧಿಸಿ ಆರೋಪಿಗಳಿಗೆ 1 ತಿಂಗಳು ಜೈಲು ಶಿಕ್ಷೆ, 500 ರೂ. ದಂಡ ವಿಧಿಸಿ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರು ಶಿಕ್ಷೆ ವಿಧಿಸಿ ಆದೇಶ ನೀಡಿದ್ದು, ಸರಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಜಯಂತಿ ಭಟ್ ಅವರು ವಾದಿಸಿದ್ದರು.
ಘಟನೆ ವಿವರ:
ಹಿಂಜಾವೇಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಕಾರ್ತಿಕ್ ಅವರು 2019ರ ಸೆ.3ರಂದು ರಾತ್ರಿ ಸುಮಾರು 10ರ ವರೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪಾಲ್ಗೊಂಡು ಬಳಿಕ ಅಲ್ಲಿಂದ ಅವರ ಊರಿನ ಸಂಪ್ಯದ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಗಣೇಶೋತ್ಸವದ ವೇದಿಕೆಯಲ್ಲಿ ನಡೆಯುತ್ತಿದ್ದ ಯಕ್ಷಗಾನ ವೀಕ್ಷಣೆಗೆ ಪೆಂಡಾಲ್ ಬಳಿ ಬಂದಿದ್ದರು.
ಈ ವೇಳೆ ಅವರೊಳಗೆ ಜಗಳ ನಡೆದು ಅದು ತಾರಕ್ಕೇರಿ ಆರೋಪಿ ಸಹೋದರರಾದ ಚರಣ್ರಾಜ್ ರೈ ಹಾಗೂ ಕಿರಣ್ ರೈ ಅವರು ಕಾರ್ತಿಕ್ ನನ್ನು ಹಿಡಿದಿಟ್ಟು ಪ್ರೀತೇಶ್ ಹರಿತವಾದ ಆಯುಧದಿಂದ ಇರಿದಿದ್ದನು. ಈ ವೇಳೆ ಗಂಭೀರ ಗಾಯಗೊಂಡಿದ್ದ ಅವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅದಾಗಲೇ ಅವರು ಮೃತಪಟ್ಟಿದ್ದರು.
ಘಟನೆಗೆ ಸಂಬಂಧಿಸಿ ಮೃತನ ಚಿಕ್ಕಪ್ಪ ಕೇಶವ ಸುವರ್ಣ ಅವರು ನೀಡಿದ್ದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಪ್ರೀತೇಶ್ ರೌಡಿ ಶೀಟರ್ ಆಗಿದ್ದನು.
ಪ್ರಕರಣದ 2ನೇ ಆರೋಪಿ ಕಿರಣ್ ರೈಯ ಸಹೋದರ ಚರಣ್ ರಾಜ್ ರೈಯನ್ನು 2022ರ ಜೂ. 4ರಂದು ಪೆರ್ಲಂಪಾಡಿಯಲ್ಲಿ ಇರಿದು ಕೊಲೆ ನಡೆಸಲಾಗಿದ್ದು, ಅದು ಪ್ರತಿಕಾರದ ಹತ್ಯೆ ಎನ್ನಲಾಗಿತ್ತು. ಪೆರ್ಲಂಪಾಡಿಯಲ್ಲಿ ಹೊಸ ಮೆಡಿಕಲ್ ತೆರೆಯುವ ಸಿದ್ಧತೆಯಲ್ಲಿದ್ದ ಆತನನ್ನು ಸಂಜೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಹತ್ಯೆ ನಡೆಸಿದ್ದರು. ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಸದ್ಯ ಪ್ರಕರಣ ವಿಚಾರಣಾ ಹಂತದಲ್ಲಿದೆ.




