ಪ್ರತಿಭಾವಂತ ನಟ, ನಿರ್ಮಾಪಕ ದಿಲೀಪ್‌ ರಾಜ್ ಹೃದಯಾಘಾತಕ್ಕೆ ಬಲಿ

Share with

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಹಾಗೂ ಜನಪ್ರಿಯ ನಿರ್ಮಾಪಕ ದಿಲೀಪ್‌ ರಾಜ್ (47) ಅವರು ಬುಧವಾರ (ಮೇ.13) ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಬೆಳಿಗ್ಗೆ ಮನೆಯಲ್ಲಿದ್ದ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದ್ದು ಕೂಡಲೇ ಆಸ್ಪತ್ರೆಗೆ ಕರೆತಂದರೂ ಅಷ್ಟು ಹೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರ ಅನಿರೀಕ್ಷಿತ ಸಾವಿನಿಂದ ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕ ದಿಗ್ಧಮೆಗೊಂಡಿದೆ.

ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ದಿಲೀಪ್, ‘ಯು-ಟರ್ನ್’, ‘ಬಾಯ್‌ಫ್ರೆಂಡ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.ಅಷ್ಟು ಮಾತ್ರವಲ್ಲದೆ ‘ಡಿ.ಆರ್. ಕ್ರಿಯೇಷನ್ಸ್’ ಮೂಲಕ ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸಿದ್ದರು. ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಹಿಟ್ಲರ್ ಕಲ್ಯಾಣ’ದಲ್ಲಿ ನಾಯಕನಾಗಿ ನಟಿಸಿ ಮನೆಮಾತಾಗಿದ್ದರು.

ನಟನೆಯ ಜೊತೆಗೆ ಕಂಠದಾನ ಕಲಾವಿದರಾಗಿ ಹಾಗೂ ರಂಗಭೂಮಿ ಕಲಾವಿದರಾಗಿಯೂ ಅವರು ಸಕ್ರಿಯರಾಗಿದ್ದರು.

ದಿಲೀಪ್‌ ರಾಜ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಸಹ ಕಲಾವಿದರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.


Share with

Leave a Reply

Your email address will not be published. Required fields are marked *