ಸುಬ್ರಹ್ಮಣ್ಯ: ಸುಮಾರು 13 ವರ್ಷಗಳ ಬಳಿಕ ಒದಗಿ ಬಂದ ಅಪರೂಪದ “ಮಹಾ ಶನಿ ಸಂಯೋಗ” ಹಿನ್ನೆಲೆಯಲ್ಲಿ ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನ ಮೇ.16ರ ಶನಿವಾರ ಅಪಾರ ಭಕ್ತ ಸಮೂಹದಿಂದ ಕಿಕ್ಕಿರಿದು ಕಂಡು ಬಂತು.

ಶನಿ ಜಯಂತಿ, ಶನಿ ಅಮಾವಾಸ್ಯೆ ಹಾಗೂ ಶನಿವಾರ – ಈ ಮೂರೂ ಒಂದೇ ದಿನ ಸೇರಿ ಬಂದ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲು ಭಕ್ತರು ಬೆಳಗ್ಗಿನಿಂದಲೇ ದೇವಸ್ಥಾನದತ್ತ ಹರಿದು ಬಂದರು.
ದೇವಾಲಯದ ಆವರಣದಲ್ಲಿ ಬೆಳಗ್ಗಿನಿಂದಲೇ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದ್ದು, ಘಂಟಾನಾದ, ವೇದಮಂತ್ರಗಳ ಮೊಳಗು ಹಾಗೂ ಪೂಜಾ ಕೈಂಕರ್ಯಗಳ ಮಧ್ಯೆ ಭಕ್ತರು ಶ್ರದ್ಧಾಭಕ್ತಿಯಿಂದ ವಿಶೇಷ ಸೇವೆಗಳನ್ನು ನೆರವೇರಿಸಿದರು. ಸುಮಾರು 500ಕ್ಕೂ ಅಧಿಕ ಭಕ್ತರು ಶ್ರೀ ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು.
ಈ ವಿಶೇಷ ಸಂದರ್ಭದಲ್ಲಿ 330 ಶನಿ ಪೂಜೆ, 170 ರುದ್ರಾಭಿಷೇಕ ಸೇರಿದಂತೆ ಹಾಲು-ಪಾಯಸ, ಅವಲಕ್ಕಿ-ಪಂಚಕಜ್ಜಾಯ ಮುಂತಾದ ವಿವಿಧ ಸೇವೆಗಳು ಭಕ್ತಿಭಾವದಿಂದ ನೆರವೇರಿದವು. ಮಧ್ಯಾಹ್ನ ನಡೆದ ಮಹಾಪೂಜೆಯಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡ ಭಕ್ತರು ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
“ಮಹಾ ಶನಿ ಸಂಯೋಗ” ದಿನ ಶನಿ ಪೂಜೆ ಹಾಗೂ ದೇವರ ದರ್ಶನ ಪಡೆದರೆ ವಿಶೇಷ ಫಲಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಷ್ಟೇ ಅಲ್ಲದೆ ದೂರದ ಊರುಗಳಿಂದಲೂ ಭಕ್ತರು ಆಗಮಿಸಿದ್ದರು. ಹಿರಿಯರ ಪ್ರಕಾರ, ಇದೇ ರೀತಿಯ ಅಪರೂಪದ ಸಂಯೋಗ ಕೊನೆಯದಾಗಿ 2013ರ ಜೂನ್ 8ರಂದು ಕಂಡುಬಂದಿತ್ತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜಗದೀಶ್ ಪಡ್ಡು, ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್, ವ್ಯವಸ್ಥಾಪನ ಸಮಿತಿ ಹಾಗೂ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




