ಕರ್ನಾಟಕ ಪತ್ರಕರ್ತರ ಸಂಘ ತಾ| ಘಟಕದ ಪದಾಧಿಕಾರಿಗಳ ಪದಪ್ರದಾನ– ಸಾಧಕರಿಗೆ ಸನ್ಮಾನ

Share with

ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ಘಟಕದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನೆಲ್ಲಿಕಟ್ಟೆಯ ಮಾತೃಛಾಯಾ ಸಭಾಭವನದಲ್ಲಿ ಜು.21ರಂದು ನಡೆಯಿತು.

ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ಹಿಂದಿನ ಕಾಲದಲ್ಲಿ ಪತ್ರಿಕೆಗಳೇ ಜನರ ಪ್ರಮುಖ ಮಾಹಿತಿ ಮಾಧ್ಯಮವಾಗಿದ್ದವು. ಇಂದು ಡಿಜಿಟಲ್ ಮಾಧ್ಯಮಗಳ ಪ್ರಭಾವ ಹೆಚ್ಚಿದ್ದರೂ ಪತ್ರಿಕೆಗಳ ಮೇಲಿನ ಜನರ ವಿಶ್ವಾಸ ಕಡಿಮೆಯಾಗಿಲ್ಲ. ವಿಶೇಷವಾಗಿ ಹಿರಿಯರು ಪತ್ರಿಕೆ ಓದದೇ ದಿನ ಆರಂಭಿಸುವುದಿಲ್ಲ. ಸಮಾಜಕ್ಕೆ ಪತ್ರಕರ್ತರು ಆನೆಬಲದಂತೆ ಇದ್ದು, ದೇವಸ್ಥಾನದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಜೀರ್ಣೋದ್ಧಾರ ಕಾರ್ಯಗಳು ಹಾಗೂ ಇತರೆ ಚಟುವಟಿಕೆಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಕರ್ತರು ಮತ್ತು ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.ಪತ್ರಕರ್ತರು ಸತ್ಯವಂತರಾಗಿಯೂ, ಗುಣವಂತರಾಗಿಯೂ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ಪತ್ರಿಕೋದ್ಯಮಕ್ಕೆ ಗೌರವ ಹೆಚ್ಚುತ್ತದೆ. ಉದ್ಯಮಿ ಕೇಶವ್ ಅಮೈ ಹಾಗೂ ಹಿರಿಯ ಪತ್ರಕರ್ತ ಜಯರಾಮ್ ಭಟ್ ಸಂಪಾಜೆ ಅವರನ್ನು ಸನ್ಮಾನಿಸಿರುವುದನ್ನು ಶ್ಲಾಘಿಸಿದ ಅವರು ಕೇಶವ್ ಅಮೈ ಅವರ ಕೃಷಿ ಸಲಕರಣೆಗಳು ಕರಾವಳಿಯ ಅಡಿಕೆ ಬೆಳೆಗಾರರಿಗೆ ಅನುಕೂಲವಾಗಿದ್ದು, ಜಯರಾಮ್ ಭಟ್ ಅವರು ಅನೇಕ ಸಾಮಾಜಿಕ ವರದಿಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ ಎಂದರು.

ಪತ್ರಿಕೋದ್ಯಮ ಯಾವತ್ತೂ ವಿರೋಧ ಪಕ್ಷವೇ:
ಮುಖ್ಯ ಅತಿಥಿಯಾಗಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಸುಧಾಕರ ಸುವರ್ಣರವರು, ಇವತ್ತಿನ ಕಾರ್ಯಕ್ರಮ ಉತ್ತಮ ಕೌಟುಂಬಿಕ ವಾತಾವರಣವನ್ನು ಬಿಂಬಿಸುತ್ತದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ತುಂಬಾ ಸಂತೋಷವಾಗಿದೆ. ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ಭಾಗದ ಪತ್ರಕರ್ತರಿಗೆ ಸುದ್ದಿ ಬಿಡುಗಡೆ ಪ್ರಮುಖ ಆಧಾರಸ್ತಂಭವಾಗಿದೆ ಎಂದರು. ಪತ್ರಿಕೋದ್ಯಮದಲ್ಲಿ ಹೊಸ ತಂತ್ರಜ್ಞಾನಗಳು ನಿರಂತರವಾಗಿ ಸೇರ್ಪಡೆಯಾಗುತ್ತಿವೆ. ಸದ್ಯ ಕೃತಕ ಬುದ್ಧಿಮತ್ತೆ (ಎಐ) ಮಾಧ್ಯಮ ಕ್ಷೇತ್ರದ ಮೇಲೆ ಪ್ರಭಾವ ಬೀರುತ್ತಿದೆ. ಎಐ ಬಂದರೂ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆಯಾಗುವುದಿಲ್ಲ. ಇಂದಿಗೂ ಜನರು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗಳನ್ನೇ ಹೆಚ್ಚು ವಿಶ್ವಾಸದಿಂದ ಸ್ವೀಕರಿಸುತ್ತಾರೆ. ಪತ್ರಕರ್ತರು ಯಾವುದೇ ವ್ಯವಸ್ಥೆಯ ಪರವಾಗಿ ನಿಲ್ಲದೆ, ಸದಾ ಸಮಾಜದ ಪರವಾಗಿ ಪ್ರಶ್ನಿಸುವ ವಿರೋಧ ಪಕ್ಷದ ಪಾತ್ರವನ್ನು ವಹಿಸಬೇಕು ಎಂದರು. ಸಮಾಜ ಗುರುತಿಸುವಂತಹ ನ್ಯಾಯಾಧೀಶರು, ಪೊಲೀಸರು ಹಾಗೂ ಅಧಿಕಾರಿಗಳ ಸಾಲಿನಲ್ಲಿ ಪತ್ರಕರ್ತರೂ ಇದ್ದಾರೆ. ಆದ್ದರಿಂದ ಸಮಾಜ ನಮ್ಮನ್ನು ಹೇಗೆ ನೋಡುತ್ತಿದೆ ಎಂಬುದರ ಆತ್ಮಾವಲೋಕನ ಅಗತ್ಯವಾಗಿದೆ. ಇಂದಿನ ದಿನಗಳಲ್ಲಿ ಮಾಧ್ಯಮ ಸಂಸ್ಥೆಗಳು ಉದ್ಯಮಗಳಾಗಿದ್ದು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಆದಾಯದ ಮೂಲಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಹಳೆಯ ಓದುಗರನ್ನು ಉಳಿಸಿಕೊಳ್ಳುವುದು ಮತ್ತು ಹೊಸ ಓದುಗರನ್ನು ಸೆಳೆಯುವುದು ಪತ್ರಿಕಾ ಮಾಧ್ಯಮಗಳ ಪ್ರಮುಖ ಸವಾಲಾಗಿದೆ ಎಂದರು.

ಇತರ ಮಾಧ್ಯಮಗಳ ಪತ್ರಕರ್ತರಿಗೂ ಸದಾ ಬೆಂಬಲ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುದ್ದಿ ಬಿಡುಗಡೆ ಪುತ್ತೂರು ಸಿಇಒ ಸೃಜನ್ ಊರುಬೈಲು ಮಾತನಾಡಿ, ಸುದ್ದಿ ಬಿಡುಗಡೆ ಸಂಸ್ಥೆ ತನ್ನ ಪತ್ರಕರ್ತರಷ್ಟೇ ಅಲ್ಲದೆ ಇತರ ಮಾಧ್ಯಮಗಳ ಪತ್ರಕರ್ತರಿಗೂ ಸದಾ ಬೆಂಬಲ ನೀಡುತ್ತದೆ ಎಂದು ಹೇಳಿ ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.

ಸಾಮಾಜಿಕ ಬದ್ಧತೆಯ ಕಾರ್ಯ ಮುಂದುವರಿಯಲಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿ, ಕರ್ನಾಟಕ ಪತ್ರಕರ್ತರ ಸಂಘ ಮತ್ತು ಕಾರ್ಯನಿರತ ಪತ್ರಕರ್ತರ ಸಂಘಗಳ ನಡುವೆ ಉತ್ತಮ ಬಾಂಧವ್ಯವಿದೆ. ಪತ್ರಕರ್ತರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸಂಘ ಸ್ಥಾಪನೆಯಾಗಿದ್ದು, ಅಪಘಾತ ವಿಮೆ ಸೇರಿದಂತೆ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪುತ್ತೂರು ಘಟಕವು ಕಳೆದ ಎಂಟು ವರ್ಷಗಳಲ್ಲಿ ಎಂಟು ಅಧ್ಯಕ್ಷರ ನೇತೃತ್ವದಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಾಮಾಜಿಕ ಬದ್ಧತೆಯ ಕಾರ್ಯಗಳು ಮುಂದುವರಿಯಬೇಕು ಎಂದು ಶುಭ ಹಾರೈಸಿದರು.

ಅಂತರ್ಜಾಲ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ:
ಸಂಘದ ಕಾನೂನು ಸಲಹೆಗಾರ ಹಾಗೂ ಅನಿಕೇತನ ಲಾ ಚೇಂಬರ್ಸ್‌ನ ಕೃಷ್ಣ ಪ್ರಸಾದ್ ನಡ್ಸಾರ್ ಮಾತನಾಡಿ, ಸಂಘಟನೆ ನಾಯಕತ್ವವನ್ನು ಬೆಳೆಸುವ ವೇದಿಕೆಯಾಗಿದೆ. ಪ್ರತಿವರ್ಷ ಹೊಸ ನಾಯಕತ್ವ ಬೆಳೆಯುತ್ತಿರುವುದು ಸಂತಸದ ಸಂಗತಿ. ಅಂತರ್ಜಾಲ ಉತ್ತಮ ಕಾರ್ಯಗಳಿಗೆ ಸಹಕಾರಿಯಾಗಿದ್ದರೂ, ಅದರ ದುರುಪಯೋಗ ನಮ್ಮನ್ನು ಅಪಾಯದ ಪರಿಸ್ಥಿತಿಗೂ ತಳ್ಳಬಹುದು. ಆದ್ದರಿಂದ ಎಚ್ಚರಿಕೆಯಿಂದ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಸಂಘದ ಆರ್ಥಿಕ ಬಲವರ್ಧನೆಗೆ ಆದ್ಯತೆ:
ಪದಸ್ವೀಕಾರ ಮಾಡಿ ಮಾತನಾಡಿದ ಶರತ್ ಕುಮಾರ್ ಪಾರ, ಸಂಘ, ಸಂಘಟನೆ ಎಲ್ಲರಿಗೂ ಮುಖ್ಯ ಪ್ರತಿಯೊಬ್ಬರೂ ಒಂದಲ್ಲ ಒಂದು ಸಂಘಟನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಂಘದ ವತಿಯಿಂದ ಕಾನೂನು ಸಲಹೆ, ವೈದ್ಯಕೀಯ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಆರ್ಥಿಕ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿ ಸದಸ್ಯರ ಸಹಕಾರ ಕೋರಿದರು.

ಸಂಘದಿಂದ ಸಾಮಾಜಿಕ ಕಾರ್ಯಕ್ರಮಗಳ ಆಯೋಜನೆ:
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪುತ್ತೂರು ಘಟಕದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ, ಪತ್ರಕರ್ತರ ವಿರುದ್ಧ ನಡೆಯುತ್ತಿದ್ದ ಅಪಪ್ರಚಾರ ಹಾಗೂ ನೈತಿಕ ಭದ್ರತೆಯ ಅಗತ್ಯವನ್ನು ಮನಗಂಡು 2009ರಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ಘಟಕವನ್ನು ಸ್ಥಾಪಿಸಲಾಯಿತು. ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಅವರ ಸಹಕಾರದೊಂದಿಗೆ ಆರಂಭವಾದ ಸಂಘದಲ್ಲಿ ಪತ್ರಿಕಾ ಕ್ಷೇತ್ರದ ಎಲ್ಲ ವಿಭಾಗಗಳ ಸಿಬ್ಬಂದಿಯನ್ನು ಸದಸ್ಯರನ್ನಾಗಿ ಮಾಡುವ ಅವಕಾಶವಿದೆ. ಸಂಘದ ಮೂಲಕ ವೈದ್ಯಕೀಯ ಶಿಬಿರಗಳು, ವಿಶೇಷ ಚೇತನರ ಆಶ್ರಮಗಳಿಗೆ ನೆರವು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ವಿವರಿಸಿದರು.

ನೂತನ ಸದಸ್ಯರಿಗೆ ಸ್ವಾಗತ:
ಸಂಘದ ನೂತನ ಸದಸ್ಯರಾದ ವಿ4 ನ್ಯೂಸ್‌ನ ಕವಿತಾ ಮಾಣಿ, ಡೇ ಟುಡೇ ನ್ಯೂಸ್‌ನ ಸಂದೀಪ್, ಸುದ್ದಿ ಬಿಡುಗಡೆಯ ಭರತ್ ಶಾಂತಿನಗರ ಅವರಿಗೆ ಹೂವು ನೀಡಿ ಸಂಘಕ್ಕೆ ಸ್ವಾಗತಿಸಿಕೊಳ್ಳಲಾಯಿತು.

ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕಿ ಶೋಭಾ ಶಿವಾನಂದ, ಗಾಣಿಗ ಯಾನೆ ಸಪಲಿಗರ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಲಕ್ಷ್ಮೀ ಪ್ರಸಾದ್ ಬೆಟ್ಟ, ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಪುತ್ತೂರು ಕೆಸಿಡಿಸಿ ಅಧೀಕ್ಷಕ ರವಿಪ್ರಸಾದ್, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ, ಸದಸ್ಯರಾದ ಮೇಘ ಪಾಲೆತ್ತಡಿ, ನಝೀರ್ ಕೊಯಿಲ, ಅನೀಶ್ ಮರಿಲ್, ಉಮಾಪ್ರಸಾದ್ ರೈ ನಡುಬೈಲು, ಲೋಕೇಶ್ ಬನ್ನೂರು, ಗಣೇಶ್ ಕಲ್ಲರ್ಪೆ, ಯತೀಶ್ ಉಪ್ಪಳಿಗೆ, ವಸಂತ ಸಾಮೆತಡ್ಕ, ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದ ಹರೀಶ್ ಬಾರಿಂಜ, ಸುಧಾಕರ್ ಕಾಣಿಯೂರು, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ನಿಶಾಕಿರಣ್ ಬಾಳೆಪುಣಿ, ಸುದ್ದಿ ಸೌಹಾರ್ದ ಸಹಕಾರಿ ಸಂಘದ ನಿವೃತ್ತ ಸಿಇಒ ನರೇಂದ್ರ ಎಂ., ಸಿಇಒ ಶಿವಪ್ರಸಾದ್ ತಲೆಪ್ಪಾಡಿ, ವ್ಯವಸ್ಥಾಪಕ ಗಣೇಶ್ ಮತ್ತು ಸಿಬ್ಬಂದಿಗಳು, ಕರ್ನಾಟಕ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಚಿತ್ರಾಂಗಿಣಿ ಮತ್ತು ರಕ್ಷಿತಾ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಉರ್ಲಾಂಡಿ ವಂದಿಸಿದರು. ಸಂಘದ ಸದಸ್ಯ ಹರಿಪ್ರಸಾದ್ ನೆಲ್ಯಾಡಿ ನಿರೂಪಿಸಿದರು. ಸಂಘದ ಸದಸ್ಯರು ಸಹಕರಿಸಿದರು.

ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾ ವಿಧಿ
ಲಂಚ, ಭ್ರಷ್ಟಾಚಾರದ ವಿರುದ್ಧದ ಸುದ್ದಿ ಸಮೂಹ ಸಂಸ್ಥೆಗಳ ಜನಾಂದೋಲನ ಪ್ರಯುಕ್ರ ಕಾರ್ಯಕ್ರಮದಲ್ಲಿ ಜಾಗೃತಿ ಫಲಕ ಅನಾವರಣಗೊಳಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕೇಶವ ಅಮೈ, ಜಯರಾಮ ಭಟ್‌ಗೆ ಸನ್ಮಾನ
ಎಸ್‌ಆರ್‌ಕೆ ಲ್ಯಾಡರ್ಸ್ ಸಂಸ್ಥಾಪಕರು, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರೂ ಆದ ಕೇಶವ ಅಮೈ ಮತ್ತು ಸುದ್ದಿ ಬಿಡುಗಡೆಯ ಪ್ರಸರಣ ವಿಭಾಗದ ನಿವೃತ್ತ ಮುಖ್ಯಸ್ಥ ಜಯರಾಮ್ ಭಟ್ ಸಂಪಾಜೆ ಅವರನ್ನು ಶಾಲು, ಹಾರ, ಪೇಟ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.ಬಳಿಕ ಮಾತನಾಡಿದ ಕೇಶವ ಅಮೈ, ತಮ್ಮ ಸಂಸ್ಥೆಯ ಕೃಷಿ ಸಲಕರಣೆಗಳನ್ನು ಖರೀದಿಸಿ ಪ್ರೋತ್ಸಾಹಿಸಿದ ಪುತ್ತೂರಿನ ರೈತರು ಮತ್ತು ಗ್ರಾಹಕರಿಗೆ ಈ ಗೌರವವನ್ನು ಅರ್ಪಿಸುವುದಾಗಿ ತಿಳಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಜಯರಾಮ್ ಭಟ್ ಸಂಪಾಜೆ ಮಾತನಾಡಿ ತಮ್ಮ ಬೆಳವಣಿಗೆಗೆ ಕಾರಣರಾದ ಎಲ್ಲರಿಗೂ ಗೌರವವನ್ನು ಸಮರ್ಪಿಸುವುದಾಗಿ ಹೇಳಿದರು.

ನೂತನ ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷರಿಂದ ಪದಪ್ರದಾನ
2026-27ನೇ ಸಾಲಿನ ನೂತನ ಅಧ್ಯಕ್ಷ ಶರತ್ ಕುಮಾರ್ ಪಾರ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಉರ್ಲಾಂಡಿ, ಕೋಶಾಧಿಕಾರಿ ಚಿತ್ರಾಂಗಿಣಿ ಸತ್ಯಪ್ರಕಾಶ್, ಉಪಾಧ್ಯಕ್ಷೆ ಸುಮಿತ್ರ ಬಿ. ನಾಯ್ಕ್, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಮಿತ್ತಡ್ಕ, ಜತೆ ಕಾರ್ಯದರ್ಶಿ ದಿನೇಶ್ ಬಡಗನ್ನೂರು ಅವರಿಗೆ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಅವರು ಶಾಲು ಮತ್ತು ಹೂವು ನೀಡಿ ಪದಪ್ರದಾನ ಮಾಡಿದರು.


Share with

Leave a Reply

Your email address will not be published. Required fields are marked *