ಲಾವಣ್ಯ ಹತ್ಯೆ ಕೇಸ್‌: ತಲವಾರು ಖರೀದಿಸಿದ ಅಂಗಡಿಯಲ್ಲಿ ಮಹಜರು

Share with

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ, ಹತ್ಯೆಗೆ ಬಳಸಿದ ತಲವಾರನ್ನು ಆರೋಪಿ ಚೇತನ್ ಉಪ್ಪಿನಂಗಡಿಯ ಕೃಷಿ ಉಪಕರಣಗಳ ಅಂಗಡಿಯೊಂದರಿಂದ ಖರೀದಿಸಿದ್ದಾನೆ ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಬಂಟ್ವಾಳ ಪೊಲೀಸರು ಬುಧವಾರ ಸಂಬಂಧಿತ ಅಂಗಡಿಯಲ್ಲಿ ಮಹಜರು ನಡೆಸಿದರು.

ಲಾವಣ್ಯಳನ್ನು ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಲಾಗಿತ್ತು. ಬಂಧನದ ಬಳಿಕ ಆತ ಇಲಿ ಪಾಷಾಣ ಸೇವಿಸಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 28ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದರು.

ವಿಚಾರಣೆ ವೇಳೆ, ತನ್ನ ಏಕಪಕ್ಷೀಯ ಪ್ರೀತಿಯನ್ನು ಲಾವಣ್ಯ ನಿರಾಕರಿಸಿದ್ದರಿಂದ ಆಕೆಯನ್ನು ಹತ್ಯೆ ಮಾಡಲು ಮುಂಚಿತವಾಗಿಯೇ ಸಂಚು ರೂಪಿಸಿದ್ದಾಗಿ ಆರೋಪಿ ತಿಳಿಸಿದ್ದಾನೆ ಎನ್ನಲಾಗಿದೆ. ಅದರಂತೆ ಜುಲೈ 15ರಂದು ಉಪ್ಪಿನಂಗಡಿಗೆ ತೆರಳಿದ್ದ ಆತ, ಕೃಷಿ ಸಲಕರಣೆಗಳ ಮಾರಾಟ ಮಳಿಗೆಯಲ್ಲಿ ಕೃಷಿಕರ ಬಳಕೆಯ ಉದ್ದನೆಯ ಕತ್ತಿಯನ್ನು ಪರಿಶೀಲಿಸಿ ಅದರ ಬೆಲೆ ವಿಚಾರಿಸಿದ್ದ. ಬಳಿಕ ಸ್ವಲ್ಪ ಸಮಯದ ನಂತರ ಮತ್ತೆ ಅದೇ ಅಂಗಡಿಗೆ ಬಂದು ಕತ್ತಿಯನ್ನು ಖರೀದಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇನ್ನು ತಲವಾರು ಖರೀದಿಸಿದ ಹಣವನ್ನು ಆರೋಪಿ ಫೋನ್‌ಪೇ ಮೂಲಕ ಪಾವತಿಸಿದ್ದಾನೆ ಎಂದು ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಈ ಸಂಬಂಧದ ದಾಖಲೆಗಳನ್ನೂ ಪರಿಶೀಲಿಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *