ಒಮಾನ್‌ನಲ್ಲಿ ತುಳುವ ಮಹಾಸಭೆಗೆ ಹೊಸ ಸಾರಥ್ಯ: ಮಲ್ಲಾರ್ ಶಶಿಧರ ಶೆಟ್ಟಿ ಅಧ್ಯಕ್ಷರಾಗಿ ನೇಮಕ

Share with

ಮಸ್ಕತ್/ಉಡುಪಿ: ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಒಮಾನ್ ಘಟಕದ ಅಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರ್ ಗ್ರಾಮದ ಮೂಲದ ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕ ಮಲ್ಲಾರ್ ಶಶಿಧರ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.

ವಾಣಿಜ್ಯ ಪದವೀಧರರಾಗಿರುವ ಅವರು ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿದ್ದು, ಒಮಾನ್‌ನ Abeer Group of Companies ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಐದು ದಶಕಗಳಿಂದ ಸಮಾಜಸೇವೆ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಅವರು ಮಹಾದೇವಿ ಕಲ್ಚರಲ್ ಕ್ಲಬ್, ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ–ಮಸ್ಕತ್, ಅಧ್ಯಾತ್ಮಿಕ ಸಮಿತಿ ಹಾಗೂ ಬಾಲಭಾರತಿ ಸ್ಟಡಿ ಸೆಂಟರ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಜೊತೆಗೆ ಭಾರತೀಯ ಪ್ರವಾಸಿ ಮಂಚ್–ಕರ್ನಾಟಕ ಘಟಕದ ಅಧ್ಯಕ್ಷರು, ಒಮಾನ್ ಬಂಟ್ಸ್ ಸಂಘ ಹಾಗೂ ತುಳು ಕೂಟ ಮಸ್ಕತ್‌ನ ಸಂಸ್ಥಾಪಕ ಸದಸ್ಯರಾಗಿದ್ದು, ಒಮಾನ್‌ನಲ್ಲಿ ತುಳು ಲಿಪಿಯ ಪ್ರಚಾರ ಮತ್ತು ಬೋಧನೆಗೂ ಮಾರ್ಗದರ್ಶನ ನೀಡುತ್ತಿದ್ದಾರೆ.

ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವು, ಮೃತ ಭಾರತೀಯರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ಕಳುಹಿಸುವ ವ್ಯವಸ್ಥೆ, ನಿರುದ್ಯೋಗಿಗಳಿಗೆ ಸಹಾಯ ಹಾಗೂ ಶಿಕ್ಷಣ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಉದಾರ ಕೊಡುಗೆ ನೀಡುವ ಮೂಲಕ ಅವರು ವಿಶಿಷ್ಟ ಸಮಾಜಸೇವೆ ಸಲ್ಲಿಸಿದ್ದಾರೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ “ವಿಶ್ವ ಮಾನ್ಯ ಕನ್ನಡಿಗ” ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.

ಅವರ ಸಂಘಟನಾ ಸಾಮರ್ಥ್ಯ ಹಾಗೂ ತುಳು-ಕನ್ನಡ ಭಾಷೆ, ಸಂಸ್ಕೃತಿ ಮತ್ತು ಭಾರತೀಯ ಮೌಲ್ಯಗಳ ಪ್ರಸಾರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರು ಮಲ್ಲಾರ್ ಶಶಿಧರ ಶೆಟ್ಟಿಯವರನ್ನು ಒಮಾನ್ ಘಟಕದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ.

ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷ ಶ್ರೀಹರಿನಾರಾಯಣ ದಾಸ್ ಅಸ್ರಣ್ಣ, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೇತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ, ತುಳುವ ಮಹಾಸಭೆಯ ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ ಹಾಗೂ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಅವರು ಸ್ವಾಗತಿಸಿ, ನೂತನ ಅಧ್ಯಕ್ಷರಿಗೆ ಅಭಿನಂದನೆ ಹಾಗೂ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ.


Share with

Leave a Reply

Your email address will not be published. Required fields are marked *