ಎಪಿಎಲ್ ಕಾರ್ಡ್ ದಾರರಿಗೂ ಆಯುಷ್ಮಾನ್ ಯೋಜನೆ ವಿಸ್ತರಣೆ: ಯು ಟಿ ಖಾದರ್

Share with

ಮಂಗಳೂರು/ಸುಳ್ಯ: ಆಯುಷ್ಮಾನ್ ಯೋಜನೆಯನ್ನು ಎಪಿಎಲ್ ಕಾರ್ಡ್‌ದಾರರಿಗೂ ವಿಸ್ತರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆದಿದ್ದು,ಕ್ರಿಯಾಯೋಜನೆ ರೂಪಿಸುವ ಹಂತದಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಹೇಳಿದರು.

ಮಂಗಳೂರು ಮತ್ತು ಸುಳ್ಯದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಲ್ ಕಾರ್ಡ್‌ಾರರು ಜನರಲ್ ವಾರ್ಡ್ ಮೂಲಕ ಬಿಪಿಎಲ್‌ಗೆ ಇರುವ ಸೇವೆ ಪಡೆಯಲು ಬಯಸಿದರೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಕ್ರಮ ವಹಿಸಲಾಗುವುದು ಎಂದರು.

ಶೀಘ್ರದಲ್ಲಿ ಹೊಸ ನೇಮಕಾತಿ

ರಾಜ್ಯದ ಆರೋಗ್ಯ ಇಲಾಖೆಯಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 1 ಸಾವಿರ ಸಿಬಂದಿ ನೇಮಕ ಆಗಲಿದ್ದು, ಅದರಲ್ಲಿ ನರ್ಸ್, ಲ್ಯಾಬ್ ಟೆಕ್ನಿಶನ್, ಫಾರ್ಮಾಸಿಸ್ಟ್ ಸಹಿತ ಹಲವು ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಕೆಇಎ ಮೂಲಕ ಅದನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುತ್ತದೆ. ಹೆಚ್ಚುವರಿ 3,500 ಹುದ್ದೆಗಳ ನೇಮಕಾತಿಗೂ ಅನುಮೋದನೆ ದೊರಕಿದ್ದು, ಇದರ ನೇಮಕಾತಿಯನ್ನು ವಿಶೇಷ ರೀತಿಯಲ್ಲಿ ಮಾಡಲು ನಿಯಮಾವಳಿ ಮಾಡಲಾಗುತ್ತದೆ ಎಂದರು.

450 ಹೊಸ ಆ್ಯಂಬುಲೆನ್ಸ್ ಖರೀದಿ

ಜಿಲ್ಲೆ ಮತ್ತು ತಾಲೂಕುಗಳಲ್ಲಿ ಉತ್ತಮ ಆ್ಯಂಬುಲೆನ್ಸ್ ಸೇವೆ ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ 20 ನಿಮಿಷ, ನಗರ ಭಾಗದಲ್ಲಿ 15 ನಿಮಿಷದಲ್ಲಿ ಆ್ಯಂಬುಲೆನ್ಸ್ ಸೇವೆ ಸಿಗುವಂತೆ ಮಾಡಲಾಗುವುದು. ದಟ್ಟಣೆ ಇರುವ ಜಾಗದಲ್ಲಿ ಬೈಕ್ ಆ್ಯಂಬುಲೆನ್ಸ್ ಜಾರಿಗೆ ತರಲಾಗುತ್ತಿದ್ದು, 100 ಬೈಕ್ ಆ್ಯಂಬುಲೆನ್ಸ್‌ಗಳು ರಾಜ್ಯದಲ್ಲಿ ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ. ಇದರ ಜತೆಗೆ 450 ಹೊಸ ಆ್ಯಂಬುಲೆನ್ಸ್ ಖರೀದಿ ಮಾಡಲಾಗುತ್ತಿದ್ದು, ಈಗ ಇರುವ 750 ಆ್ಯಂಬುಲೆನ್ಸ್‌ಗಳನ್ನು ಮತ್ತಷ್ಟು ಸುಧಾರಣೆ ತರುವ ಕೆಲಸ ಮಾಡಲಿದ್ದೇವೆ. ಆ್ಯಂಬುಲೆನ್ಸ್ ಸೇವೆ ನೀಡಲು ತಡವಾದರೆ ದಂಡ ಹಾಕುವ ಕಾರ್ಯವನ್ನು ಮಾಡಲು ಕೂಡ ಷರತ್ತಿನಲ್ಲಿ ಉಲ್ಲೇಖ ಮಾಡಲಾಗಿದೆ ಎಂದರು.


Share with

Leave a Reply

Your email address will not be published. Required fields are marked *