ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೋರ್ವ ಪ್ರಮುಖ ಆರೋಪಿಯ ಬಂಧನ

Share with

ನವದೆಹಲಿ: 2022ರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ನಡೆದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೋರ್ವ ಪ್ರಮುಖ ಆರೋಪಿ ಉಮರ್ ಫಾರೂಕ್ ಎಂ.ಆರ್. ನನ್ನ ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಬುಧವಾರ(ಆ5)ಕೇರಳದ ಕೊಚ್ಚಿಯಲ್ಲಿ ಉಮರ್ ಫಾರೂಕ್ ನನ್ನು ಬಂಧಿಸಲಾಗಿದೆ.

ತಲೆಮರೆಸಿಕೊಂಡಿದ್ದ ಉಮರ್ ಫಾರೂಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್‌ (RCN) ಹಾಗೂ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು. ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ ಎನ್‌ಐಎ 4 ಲಕ್ಷ ರೂ. ಇನಾಮನ್ನೂ ಘೋಷಿಸಲಾಗಿತ್ತು.

ಪ್ರವೀಣ್ ನೆಟ್ಟಾರು ಹತ್ಯೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ (IPC) ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA) ಅಡಿಯಲ್ಲಿ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು.

ತನಿಖೆಯ ಪ್ರಕಾರ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಸುಳ್ಯ ಕಚೇರಿಯಲ್ಲಿ ನಡೆದ ಸಂಚು ಸಭೆಯಲ್ಲಿ ಉಮ್ಮರ್ ಫಾರೂಕ್ ಇತರ ಆರೋಪಿಗಳೊಂದಿಗೆ ಭಾಗವಹಿಸಿದ್ದ. ಇದೇ ವೇಳೆ, ಹತ್ಯೆಗೆ ಮುನ್ನ ಬೆಳ್ಳಾರೆ ಗ್ರಾಮದಲ್ಲಿ ಪ್ರವೀಣ್ ಮೇಲೆ ದಾಳಿ ನಡೆಸಲು ಸ್ಥಳ ಗುರುತಿಸುವುದು ಹಾಗೂ ಸ್ಥಳ ಪರಿಶೀಲನೆ ನಡೆಸಲು ಸಹಆರೋಪಿಯೊಬ್ಬನಿಗೆ ತನ್ನ ಬೈಕ್ ನೀಡಲು ಆತ ಒಪ್ಪಿಕೊಂಡಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಪ್ರಕರಣದ ರಕ್ಷಿತ ಸಾಕ್ಷಿದಾರನನ್ನು ಹತ್ಯೆ ಮಾಡಲು ನಡೆದ ಯತ್ನದಲ್ಲಿಯೂ ಇತರ ಆರೋಪಿಗಳೊಂದಿಗೆ ಭಾಗಿಯಾಗಿದ್ದಾನೆ ಎಂಬ ಆರೋಪವೂ ಆತನ ಮೇಲಿದೆ.

ಈ ವರ್ಷದ ಜುಲೈನಲ್ಲಿ ಎನ್‌ಐಎ ಮತ್ತಿಬ್ಬರು ತಲೆಮರೆಸಿಕೊಂಡಿದ್ದ ಆರೋಪಿಗಳಾದ ಅಬ್ದುಲ್ ನಾಸಿರ್ ಪಿ. ಅಲಿಯಾಸ್ ನಾಸಿರ್ ಹಾಗೂ ನೌಶಾದ್ ಅವರನ್ನು ಕ್ರಮವಾಗಿ ಕೇರಳದ ಕೊಚ್ಚಿ ಮತ್ತು ತಮಿಳುನಾಡಿನ ಹೊಸೂರುಗಳಲ್ಲಿ ಬಂಧಿಸಿತ್ತು. ಆಂಧ್ರ ಪ್ರದೇಶ ಪೊಲೀಸರಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಈ ಸಂಯೋಜಿತ ಕಾರ್ಯಾಚರಣೆ ನಡೆಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈ 26ರಂದು ಹತ್ಯೆ ಮಾಡಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಬಳಿಕ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿತ್ತು. ತನಿಖೆಯಲ್ಲಿ ಈ ಹತ್ಯೆ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ರೂಪಿಸಿದ್ದ ಸಂಚಿನ ಭಾಗವಾಗಿತ್ತು ಎಂಬುದು ಬಹಿರಂಗವಾಗಿದೆ.

ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಿ ಬಂಧಿಸುವ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.


Share with

Leave a Reply

Your email address will not be published. Required fields are marked *