ಕಾಪು (ಮಂಗಳೂರು): ಪ್ರತಿ ಹೋಟೆಲ್‌ನಲ್ಲಿ ಪರಿಶುದ್ಧತೆ ಬಗ್ಗೆ ಗಮನಹರಿಸುವ ಉದ್ದೇಶದೊಂದಿಗೆ ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಕಮಿಷನರ್ ಶ್ರೀನಿವಾಸ್ ನೇತೃತ್ವದಲ್ಲಿ ಆಹಾರ ಸುರಕ್ಷೆ ತಂಡಗಳಿಂದ ತಪಾಸಣೆ ಆರಂಭಿಸಲಾಗಿದೆ. ಮೇಲಿನಿಂದಲೇ ಕಟ್ಟುನಿಟ್ಟಿನ ತಪಾಸಣೆ ನಡೆಸಿ ಕ್ರಮ ಕೈಗೊಂಡರೆ, ಕೆಳಗಿನವರೆಗೂ ಆಹಾರ ಗುಣಮಟ್ಟ ಸುಧಾರಿಸಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು. ಆಹಾರ ಸುರಕ್ಷೆಗೆ ಕಟ್ಟುನಿಟ್ಟಿನ ತಪಾಸಣೆ ಬಗ್ಗೆ ಕಾಪುವಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಹೋಟೆಲ್‌ಗಳಲ್ಲಿ ಆಹಾರಕ್ಕೆ ರಾಸಾಯನಿಕ ಬಣ್ಣ ಬಳಸಲಾಗುತ್ತದೆ ಎಂಬ ಆರೋಪಗಳಿದ್ದು, ಇವೆಲ್ಲವನ್ನೂ ಪರಿಶೀಲಿಸಲಾಗುತ್ತದೆ. ಅಗತ್ಯ ಬಿದ್ದರೆ ರಾಜ್ಯದೆಲ್ಲೆಡೆ ಆಹಾರ ಸುರಕ್ಷೆಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಅತೀ ಶೀಘ್ರ ಆಂಬುಲೆನ್ಸ್ ತಲುಪಿಸುವ ಗುರಿ
ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆಯವರೆಗೆ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು. ನಗರ ಪ್ರದೇಶಗಳಲ್ಲಿ 15 ನಿಮಿಷ ಹಾಗೂ ಗ್ರಾಮೀಣ ಪ್ರದೇಶಕ್ಕೆ 20 ನಿಮಿಷದೊಳಗೆ ಆಂಬುಲೆನ್ಸ್ ತಲುಪುವಂತೆ ವ್ಯವಸ್ಥೆ ರೂಪಿಸುವ ಗುರಿಯಿದೆ. ಅಗತ್ಯ ವೈದ್ಯಕೀಯ ಸಿಬಂದಿ ನೇಮಕ ಮಾಡಿ, ಆಸ್ಪತ್ರೆಗೆ ಬರುವ ಪ್ರತಿಯೊಬ್ಬರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಒತ್ತು ನೀಡಲಾಗುವುದು ಎಂದರು.
ಜನರು ಆರೋಗ್ಯವಂತರಾಗಿರಲು ಆದ್ಯತೆ ನೀಡಬೇಕು. ಉತ್ತಮ ಆಹಾರ ಸೇವನೆ, ಸಮರ್ಪಕ ನಿದ್ರೆ, ಬೆಳಗಿನ ವ್ಯಾಯಾಮ ಹಾಗೂ ಉತ್ತಮ ಪರಿಸರ ಕಾಪಾಡಿಕೊಳ್ಳುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೇಡಿಕೆ ಹೆಚ್ಚಾದರೆ ತಾಲ್ಲೂಕು ಆಸ್ಪತ್ರೆ
ಕಾಪು ತಾಲ್ಲೂಕು ಆಸ್ಪತ್ರೆ ನಿರ್ಮಾಣದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿ, ಹಲವು ಕಡೆ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಹಾಸಿಗೆಗಳು ಭರ್ತಿಯಾಗುತ್ತಿಲ್ಲ. ಇರುವ ಆಸ್ಪತ್ರೆಗಳಲ್ಲಿ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ವ್ಯವಸ್ಥೆ ಬಲಪಡಿಸುವುದು ಮೊದಲ ಆದ್ಯತೆ. ಈಗಿರುವ ಆರೋಗ್ಯ ವ್ಯವಸ್ಥೆಯಲ್ಲಿ ಬೇಡಿಕೆ ಹೆಚ್ಚಾದಲ್ಲಿ ಕಾಪುವಿನಲ್ಲಿ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೂ ಒತ್ತು ನೀಡಲಾಗುವುದು ಎಂದರು.




