ಪಾಂಡೇಶ್ವರದ ಖಾಸಗಿ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳ ಮೇಲೆ ರಾಗಿಂಗ್..!! ಆರೋಪಿಗಳ ವಿರುದ್ಧ ಪ್ರಕರಣ ದಾಖಲು

Share with

ಮಂಗಳೂರು: ಇಲ್ಲಿನ ಖಾಸಗಿ ಕಾಲೇಜಿನ ಇಬ್ಬರು ಕಿರಿಯ ವಿದ್ಯಾರ್ಥಿಗಳ ಮೇಲೆ ರ್ಯಾಗಿಂಗ್ ನಡೆಸಿದ ಆರೋಪದಡಿ 9 ಮಂದಿ ಹಿರಿಯ ವಿದ್ಯಾರ್ಥಿಗಳ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಸೀದ್ ಅಮೀರ್, ಆದಿಲ್ ಎಂ., ಅರ್ಶಕ್, ಅನೀಶ್, ಉವೈಸ್, ರೋಹನ್ ರಮೇಶ್, ಆದಿಲ್ ವಿ.ಪಿ., ರೆಹಾನ್ ಎಂ.ಪಿ. ಹಾಗೂ ಶಿನಾಸ್ ಆರೋಪಿ ವಿದ್ಯಾರ್ಥಿಗಳು.

ಕಾಲೇಜಿನ ಬಿಬಿಎ ಪೋರ್ಟ್ ಶಿಪ್ಪಿಂಗ್ ಲಾಜಿಸ್ಟಿಕ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಅಮೀರ್ ಆಲಿ ಹಾಗೂ ಮಹಮ್ಮದ್ ಅಲ್ಪಾಜ್ ಅವರು ಸೆ.19 ರಂದು ಕಾಲೇಜಿನಿಂದ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ವಿದ್ಯಾರ್ಥಿಗಳು ಅವರನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ರೂಮಿಗೆ ಕರೆದೊಯ್ದಿದ್ದಾರೆ. ಅಲ್ಲಿ ಬಟ್ಟೆ ಬಿಚ್ಚಿಸಿ, ಬೆಲ್ಟ್, ಹ್ಯಾಂಗರ್ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದಾರೆ. ಕುಡಿಯಲು ನೀರು ಕೇಳಿದಾಗ ಕಲುಷಿತ ನೀರು ಕೊಟ್ಟಿದ್ದು, ಅದನ್ನು ಕುಡಿಯಲು ನಿರಾಕರಿಸಿದಾಗ ಮೈ ಮೇಲೆ ಎರಚಿದ್ದಾರೆ. ಈ ಬಗ್ಗೆ ವಿಷಯ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ. ಕಾಲೇಜಿನಲ್ಲಿ ಆರೋಪಿಗಳಲ್ಲಿ ಓರ್ವನಾದ ನಾಸೀದ್ ಅಮೀರ್, ಕ್ಲೀನ್ ಶೇವ್ ಮಾಡಿ ಬರಬೇಕು, ಶೂ ಹಾಕಬಾರದು ಎಂದೆಲ್ಲ ಹೆದರಿಸಿದ್ದಾನೆ ಎಂದು ಸಂತ್ರಸ್ತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಆರೋಪಿ ರೆಹಾನ್ ಎಂ.ಪಿ. ಎಂಬಾತ ರೂಮಿನಲ್ಲಿದ್ದಾಗ ಕಬ್ಬಿಣದ ಪಂಚ್‌ನಿಂದ ಹಣೆಗೆ ಗುರಿ ಇಟ್ಟು ಹೊಡೆದಿದ್ದು, ಆಗ ತಪ್ಪಿಸಿಕೊಳ್ಳದೆ ಇದ್ದಿದ್ದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇತ್ತು ಎಂದು ಅಮೀರ್ ಆಲಿ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *