SIR ಪ್ರಕ್ರಿಯೆ.. ನಟ ಪ್ರಕಾಶ್ ರೈ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್!

Share with

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಇದೀಗ ನಟ ಪ್ರಕಾಶ್ ರೈ ಅವರ ವಿಚಾರದಲ್ಲೂ ಚರ್ಚೆಗೆ ಕಾರಣವಾಗಿದೆ. SIR ಪ್ರಕ್ರಿಯೆಯ ಬಳಿಕ ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸುತ್ತಿಲ್ಲ ಎಂದು ನಟ ಪ್ರಕಾಶ್ ರೈ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರಕಾಶ್ ರೈ, ಬೆಂಗಳೂರಿನಲ್ಲಿ SIR ಪ್ರಕ್ರಿಯೆಯಡಿ ಹೆಸರು ಕಳೆದುಕೊಂಡಿರುವ ಲಕ್ಷಾಂತರ ಮತದಾರರಲ್ಲಿ ತಾನೂ ಒಬ್ಬ ಎಂದು ಹೇಳಿದ್ದಾರೆ. ತಾವು ಹುಟ್ಟಿ, ಬೆಳೆದ ಕ್ಷೇತ್ರದಲ್ಲೇ ತಮ್ಮ ಮತದಾರರ ನೋಂದಣಿ ರದ್ದಾಗಿರುವುದು ಅಚ್ಚರಿ ಹಾಗೂ ಪ್ರಶ್ನೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾವು ಇದೇ ಬೆಂಗಳೂರಿನ ಕ್ಷೇತ್ರದಿಂದ 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರೂ, ಇದೀಗ ತಮ್ಮ ಹೆಸರೇ ಮತದಾರರ ಪಟ್ಟಿಯಿಂದ ತೆಗೆದುಹಾಕಿರುವುದನ್ನು ಪ್ರಕಾಶ್ ರೈ ಪ್ರಶ್ನಿಸಿದ್ದಾರೆ. SIR ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಮತದಾರರ ಹಕ್ಕುಗಳ ಕುರಿತು ಅವರು ತಮ್ಮ ವಿಡಿಯೋ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆಯ ನಡುವೆ, ಪ್ರಕಾಶ್ ರೈ ಅವರ ಮತದಾರರ ನೋಂದಣಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣವೂ ಈ ಹಿಂದೆ ಸುದ್ದಿಯಾಗಿತ್ತು. ಹಲವು ರಾಜ್ಯಗಳಲ್ಲಿ ಮತದಾರರ ನೋಂದಣಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬೆಂಗಳೂರಿನ ನ್ಯಾಯಾಲಯ ಜುಲೈ 10ರಂದು ಅವರಿಗೆ ಜಾಮೀನು ನೀಡಿತ್ತು. ನ್ಯಾಯಾಲಯ ₹4,000 ನಗದು ಭದ್ರತೆಯ ಮೇಲೆ ಜಾಮೀನು ಮಂಜೂರು ಮಾಡಿತ್ತು.

ಪ್ರಕಾಶ್ ರೈ ಅವರ ಹೊಸ ಆರೋಪ ಇದೀಗ SIR ಪ್ರಕ್ರಿಯೆ, ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಅರ್ಹ ಮತದಾರರ ಹೆಸರುಗಳ ರಕ್ಷಣೆಯ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.


Share with

Leave a Reply

Your email address will not be published. Required fields are marked *