ಸುಪ್ರೀಂಕೋರ್ಟ್‌ಗೆ ಹೋಗ್ತೀವಿ ಎಂದಿದ್ದ ಸರ್ಕಾರ ಯೂ-ಟರ್ನ್: ಕೆಆರ್‌ಎಸ್ನಿಂದ ತಮಿಳುನಾಡಿಗೆ ನೀರು ಬಿಡುಗಡೆ!

Share with

ಮಂಡ್ಯ, ಸೆಪ್ಟೆಂಬರ್ 10: ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ, ಈ ಸಂಬಂಧ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ ಎಂದಿದ್ದ ರಾಜ್ಯ ಸರ್ಕಾರ ಇದೀಗ ಜಲಾಶಯಗಳಿಂದ ಭಾರಿ ಪ್ರಮಾಣದ ನೀರನ್ನು ನದಿಗೆ ಹರಿಸುತ್ತಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಇತ್ತೀಚೆಗಷ್ಟೇ ಮುಂದಿನ 15 ದಿನಗಳ ಕಾಲ ನಿತ್ಯ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿತ್ತು. ರಾಜ್ಯದ ಜಲಾಶಯಗಳಲ್ಲಿ ನೀರಿನ ಕೊರತೆಯಿದೆ ಎಂದು ಪ್ರತಿಪಾದಿಸುತ್ತಲೇ ಸರ್ಕಾರ ಕೆಆರ್‌ಎಸ್ ಡ್ಯಾಂನಿಂದ ನೀರು ಬಿಡುಗಡೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.


ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ ಕುಸಿತ: 8,121 ಕ್ಯೂಸೆಕ್ ಹೊರಹರಿವು
ಸದ್ಯ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕೇವಲ 106.42 ಅಡಿಗಳಷ್ಟಿದ್ದು, ಕೇವಲ 28.275 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಜಲಾಶಯಕ್ಕೆ ಒಳಹರಿವು ಕೇವಲ 2,304 ಕ್ಯೂಸೆಕ್ ಇರುವ ಈ ಸಂದರ್ಭದಲ್ಲೇ, ಡ್ಯಾಂನಿಂದ ಬರೋಬ್ಬರಿ 8,121 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಒಳಹರಿವಿಗಿಂತ ನಾಲ್ಕು ಪಟ್ಟು ಹೆಚ್ಚಿನ ನೀರನ್ನು ಹೊರಬಿಡುತ್ತಿರುವುದು ರೈತರ ಆತಂಕ ಹೆಚ್ಚಿಸಿದೆ.

ಹಾರಂಗಿಯಿಂದಲೂ ಕದ್ದುಮುಚ್ಚಿ ನೀರು ಬಿಡುಗಡೆ ಆರೋಪ
ಇನ್ನೊಂದೆಡೆ ಕೊಡಗಿನ ಹಾರಂಗಿ ಜಲಾಶಯದಿಂದಲೂ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡಲಾಗುತ್ತಿದೆ ಎಂಬ ಗಂಭೀರ ಅನುಮಾನ ವ್ಯಕ್ತವಾಗಿದೆ. ಜಲಾಶಯದ ನಾಲ್ಕು ಕ್ರೆಸ್ಟ್ ಗೇಟ್‌ಗಳ ಮೂಲಕ ಅಂದಾಜು 3,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದರೂ, ನೀರಾವರಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡುತ್ತಿಲ್ಲ.

ಕೊಡಗಿನಲ್ಲಿ ಕಳೆದೊಂದು ವಾರದಿಂದ ಮಳೆಯಿಲ್ಲದೆ ಜಲಾಶಯದ ಒಳಹರಿವು ಕೇವಲ 1,324 ಕ್ಯೂಸೆಕ್‌ಗೆ ಕುಸಿದಿದೆ. ನೀರಿನ ಮಟ್ಟ ದಿನೇ ದಿನೇ ಇಳಿಕೆಯಾಗುತ್ತಿದ್ದರೂ ನದಿಗೆ ನೀರು ಬಿಡುತ್ತಿರುವ ಅಧಿಕಾರಿಗಳ ನಡೆ ತೀವ್ರ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಮೈಸೂರಿನಲ್ಲಿ ತಲೆ ಮೇಲೆ ಚಪ್ಪಡಿ ಕಲ್ಲು ಹೊತ್ತು ಪ್ರತಿಭಟನೆ
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿರುವುದನ್ನು ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರರು ರಸ್ತೆಗಿಳಿದಿದ್ದಾರೆ. ಮೈಸೂರಿನ ಕಾಡಾ ಕಚೇರಿ ಎದುರು ತಲೆ ಮೇಲೆ ಚಪ್ಪಡಿ ಕಲ್ಲುಗಳನ್ನು ಹೊತ್ತುಕೊಂಡು ವಿನೂತನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ‘ಕಾವೇರಿ ನಮ್ಮದು, ನಮಗೆ ನ್ಯಾಯ ಬೇಕು’ ಎಂದು ಘೋಷಣೆ ಕೂಗಿದರು.

ತಕ್ಷಣವೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಹಾಗೂ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *