ಅಯೋಧ್ಯೆಯಲ್ಲಿ ತಂದೆ ನೆನಪಿಗೆ ಧರ್ಮಶಾಲೆ ಕಟ್ಟಲು ಮುಂದಾದ ಅಮಿತಾ ಬಚ್ಚನ್

Share with

ಅಯೋಧ್ಯೆ: ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ದಿವಂಗತ ತಂದೆ ಹಾಗೂ ಪ್ರಸಿದ್ಧ ಕವಿ ಡಾ. ಹರಿವಂಶ ರಾಯ್ ಬಚ್ಚನ್ ಅವರ ನೆನಪಿನಲ್ಲಿ ಧಾರ್ಮಿಕ ನಗರಿ ಅಯೋಧ್ಯೆಯಲ್ಲಿ ಬೃಹತ್ ಧರ್ಮಶಾಲೆಯೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಪ್ರಸ್ತಾವಿತ ಕಟ್ಟಡದ ನಕ್ಷೆ (ಪ್ಲಾನ್) ಅನುಮೋದನೆಗಾಗಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ (ಎಡಿಎ) ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆಗೆ ದೇಶದ ವಿವಿಧ ಮೂಲೆಗಳಿಂದ ಆಗಮಿಸುವ ಭಕ್ತಾದಿಗಳಿಗೆ ಸುಸಜ್ಜಿತ ಮತ್ತು ಸಂಘಟಿತ ತಂಗುದಾಣ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಧರ್ಮಶಾಲೆಯನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತಾವಿತ ಯೋಜನೆಯ ಪ್ರಕಾರ, ಈ ಧರ್ಮಶಾಲೆಯಲ್ಲಿ 20ಕ್ಕೂ ಹೆಚ್ಚು ಸುಸಜ್ಜಿತ ಕೊಠಡಿಗಳು ಇರಲಿವೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಯೋಧ್ಯೆ ನಗರಾಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಅನುರಾಗ್ ಜೈನ್ ಅವರು, ಭವ್ಯ ಅಯೋಧ್ಯೆಯ ನಿರ್ಮಾಣದಲ್ಲಿ ದೇಶಾದ್ಯಂತದ ಹಲವು ಗಣ್ಯ ವ್ಯಕ್ತಿಗಳು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದಿದ್ದಾರೆ. ಇದೇ ಸರಣಿಯಲ್ಲಿ ನಟ ಅಮಿತಾಭ್ ಬಚ್ಚನ್ ಅವರು ಸಹ ಧರ್ಮಶಾಲೆ ನಿರ್ಮಾಣದ ನಕ್ಷೆಗೆ ಅನುಮೋದನೆ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಿಯಮಗಳ ಪ್ರಕಾರ, ಈ ಯೋಜನೆಯ ನಕ್ಷೆಯನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಅವಕಾಶ ನೀಡಲಾಗಿದೆ. ನಿಗದಿತ ಆಕ್ಷೇಪಣೆ ಸಲ್ಲಿಕೆ ಅವಧಿ ಮುಕ್ತಾಯಗೊಂಡ ನಂತರ, ಯೋಜನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ನಿಯಮಾವಳಿಗಳಿಗೆ ಅನುಗುಣವಾಗಿ ಅಂತಿಮ ಅನುಮೋದನೆ ನೀಡಲಾಗುವುದು ಎಂದು ಜೈನ್ ವಿವರಿಸಿದ್ದಾರೆ.


Share with

Leave a Reply

Your email address will not be published. Required fields are marked *