ಮಂಗಳೂರು: ಉತ್ತರ ಕರ್ನಾಟಕ ಹಾಗೂ ಕರಾವಳಿ ಮಧ್ಯದ ಸಂಪರ್ಕವನ್ನು ಕಲ್ಪಿಸುವ ವಿಜಯಪುರ–ಮಂಗಳೂರು ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮತ್ತು ಮಂಗಳೂರು ಸೆಂಟ್ರಲ್ ತನಕ ರೈಲು ಸಂಚಾರ ವಿಸ್ತರಣೆಗೆ ಆಗ್ರಹಿಸಿ ಆನ್ಲೈನ್ ಸಹಿ ಸಂಗ್ರಹ ಅಭಿಯಾನ ಆರಂಭಗೊಂಡಿದೆ.


ವಿಜಯಪುರ–ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ವಿಶೇಷ ರೈಲು (07377) ಪ್ರತಿದಿನ ಸಂಜೆ 6.35ಕ್ಕೆ ವಿಜಯಪುರದಿಂದ ಹೊರಡಿ ಮರುದಿನ ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್ ತಲುಪುತ್ತದೆ. ಮಂಗಳೂರು ಜಂಕ್ಷನ್ನಿಂದ (ರೈಲು ಸಂಖ್ಯೆ 07378) ಮಧ್ಯಾಹ್ನ 2.55ಕ್ಕೆ ಹೊರಟು ಮರುದಿನ ಬೆಳಿಗ್ಗೆ 9.35ಕ್ಕೆ ವಿಜಯಪುರ ತಲುಪುತ್ತದೆ. ಈ ಸಮಯವು ಪ್ರಯಾಣಿಕರಿಗೆ ಅನಾನುಕೂಲಕರವಾಗಿದೆ. ಅದರಿಂದ ಸಮಯ ಬದಲಾವಣೆ ಮಾಡಬೇಕು ಎಂಬುದು ರೈಲು ಪ್ರಯಾಣಿಕರ ಆಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ರೈಲ್ವೆ ಯಾತ್ರಿ ಸಂಘ ಸಹಿತ ಹೋರಾಟಗಾರರು ಬೇಡಿಕೆಯನ್ನು ಇಟ್ಟಿದ್ದಾರೆ.
ಬಾಗಲಕೋಟೆ, ಗದಗ, ಹಾವೇರಿ, ದಾವಣಗೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ ರೈಲ್ವೆ ನಿಲ್ದಾಣಗಳ ಮೂಲಕ ಹಾದು ಹೋಗುವ ಈ ರೈಲಿನಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರಯಾಣ ಮಾಡುತ್ತಾರೆ. ಅದರಿಂದ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಜತೆಯಲ್ಲಿ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದವರೆಗೂ ಸಂಚರಿಸಬೇಕು ಎಂದು ಪ್ರಯಾಣಿಕರ ಆಗ್ರಹವಾಗಿದೆ.
ವಿಜಯಪುರದಿಂದ ಸಂಜೆ 4 ಗಂಟೆಯ ವೇಳೆಗೆ ರೈಲು ಹೊರಟು ರಾತ್ರಿ 9.30ಕ್ಕೆ ಹುಬ್ಬಳ್ಳಿ ಬಂದು, ಬೆಳಿಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪುವಂತಾಗಬೇಕು. ಇಲ್ಲಿಂದ ಸಂಜೆ 5 ಗಂಟೆಗೆ ಹೊರಟು, ಬೆಳಿಗ್ಗೆ 5 ಗಂಟೆಗೆ ಹುಬ್ಬಳ್ಳಿ ತಲುಪಿ, ಬೆಳಿಗ್ಗೆ 10.30ಕ್ಕೆ ವಿಜಯಪುರ ತಲುಪುವಂತೆ ವೇಳಾಪಟ್ಟಿ ಬದಲಿಸಿದರೆ ಅನುಕೂಲವಾಗುತ್ತದೆ. ಅಲ್ಲದೆ, ಮಂಗಳೂರು ಜಂಕ್ಷನ್ಗೆ ಕೊನೆಯಾಗುವ ರೈಲನ್ನು ಮಂಗಳೂರು ಸೆಂಟ್ರಲ್ವರೆಗೆ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಹಿ ಸಂಗ್ರಹ ಅಭಿಯಾನವು ನವೆಂಬರ್ 15ರವರೆಗೆ ನಡೆಯಲಿದ್ದು https://chng.it/PxXYGqrP ಈ ಲಿಂಕ್ನಲ್ಲಿ ಸಹಿ ಮಾಡಿ ಅಭಿಯಾನವನ್ನು ಬೆಂಬಲಿಸಬಹುದು ಎಂದು ಅವರು ವಿನಂತಿಸಲಾಗಿದೆ.




