ಬೆಂಗಳೂರು: ಹೊಸ ಸರ್ಕಾರ ನೀಡಿರುವ ಎರಡನೇ ಗ್ಯಾರಂಟಿ ʼಅನ್ನಭಾಗ್ಯ’ದಡಿ ಈಗಾಗಲೇ ಘೋಷಿಸಿದಂತೆ ಅಕ್ಕಿ ಬದಲಿಗೆ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಇಂದಿನಿಂದ (ಜು.10) ಅಧಿಕೃತ ಚಾಲನೆ ದೊರೆಯಲಿದೆ.
ಇಂದು ಸಂಜೆ 5ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಾಂಕೇತಿಕವಾಗಿ ಫಲಾನುಭವಿಗಳ ಖಾತೆಗೆ ನಗದು ವರ್ಗಾವಣೆ ಮಾಡುವ ಮೂಲಕ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಮತ್ತಿತರರು ಈ ಈ ಸಂಧರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಕೇಂದ್ರ ಸರ್ಕಾರವು ಪ್ರಸ್ತುತ ನೀಡುವ 5 ಕೆ.ಜಿ ಜತೆಗೆ ರಾಜ್ಯ ಸರ್ಕಾರ ಕೂಡ ತಲಾ 5 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಇದಕ್ಕಾಗಿ ಮಾಸಿಕ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಅವಶ್ಯಕತೆ ಇದೆ. ಆದರೆ, ಹೆಚ್ಚುವರಿ ಅಕ್ಕಿ ಪೂರೈಕೆಗೆ ಕೇಂದ್ರ ನಿರಾಕರಿಸಿದ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳಿಂದ ಖರೀದಿಸಲು ಸರ್ಕಾರ ಪ್ರಯತ್ನಿಸಿತು. ಇದು ಫಲಿಸದಿದ್ದಾಗ, ಅನಿವಾರ್ಯವಾಗಿ ಅಕ್ಕಿಯ ಬದಲಿಗೆ ಅಷ್ಟೇ ಹಣವನ್ನು ಫಲಾನುಭವಿಗಳಿಗೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ಘೋಷಿಸಿದ್ದರು. ಆ ಪ್ರಕ್ರಿಯೆಗೆ ಈಗ ಚಾಲನೆ ದೊರೆಯುತ್ತಿದೆ.