ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ “ಧಾನ್ಯ ಲಕ್ಷ್ಮಿ” ಕೃಷಿ ಯೋಜನೆಯಡಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಭತ್ತ ಕಟಾವು ಮಾಡುವ ಕಾರ್ಯಕ್ರಮವನ್ನು ‘ಕೊಯ್ಲು ಉತ್ಸವ’ವಾಗಿ ಹಬ್ಬದ ರೀತಿಯಲ್ಲಿ ನರಕಚತುರ್ದಶಿಯಂದು ಆಯೋಜಿಸಲಾಗಿತ್ತು.

ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ “ಕೃಷಿ ಉತ್ಪನ್ನ(ಭತ್ತ)ಮಾತ್ರವಲ್ಲದೆ ನಾವು ಉಸಿರಾಡುವ ಆಮ್ಲಜನಕ ಕೂಡಾ ದೊರೆಯುವ ಕಾರಣ ಕೃಷಿಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಿ ಬಾಳೋಣ” ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿಸಾಧಕರಾದ ಅಂಗಡಿಹಳ್ಳಿ ಹೊಸಮನೆಯ ಮುಸ್ತಫಾ ಮತ್ತು ಸಾವಯವ ಕೃಷಿಯಲ್ಲಿ ಸಾಧನೆ ಮಾಡುತ್ತಿರುವ ಪುತ್ತೂರಿನ ಹರಿಕೃಷ್ಣ ಕಾಮತ್ ರನ್ನು ಪೂಜ್ಯರು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿದ್ದ ಜಯರಾಮ ಬಲ್ಲಂಗುಡೇಲು ಮತ್ತು ಬಾಲಕೃಷ್ಣ ಪಡ್ಪುರವರು ಕೃಷಿಯ ಅನುಭವದ ಮಾತುಗಳನ್ನಾಡಿದರು. ಕರ್ನಾಟಕ ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿಯವರು ಅಧ್ಯಕ್ಷತೆ ವಹಿಸಿದ್ದರು.
ಅನಿಲ್ ಕೊಂಡೆವೂರು ಪ್ರಾರ್ಥನೆ, ಸರ್ವೇಶ್ ಎಂ. ಕೊಂಡೆವೂರು ಸ್ವಾಗತ, ಮತ್ತು ಗಂಗಾಧರ ಕೊಂಡೆವೂರು ವಂದನಾರ್ಪಣೆಗೈದರು. ಸದಾಶಿವ ಮೋಂತಿಮಾರು ನಿರೂಪಿಸಿದರು. ನಂತರ ಭತ್ತದ ಗದ್ದೆಯಲ್ಲಿ ಪೂಜ್ಯರ ನೇತೃತ್ವದಲ್ಲಿ ಅತಿಥಿಗಳು, ಮಾತೆಯರು, ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳು ಸೇರಿ ಗದ್ದೆಕಟಾವನ್ನು ಸಂಭ್ರಮದಿಂದ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶ್ರೀಗಳವರು ಗದ್ದೆಕೊಯ್ಲಿನ ಮಾಹಿತಿಯನ್ನು ವಿವರಿಸಿದರು.




