ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವವು ಇದೇ ತಿಂಗಳ 21ರಿಂದ 26ರ ತನಕ ನಡೆಯಲಿದ್ದು, ಇದರ ಪೂರ್ವ ಸಿದ್ಧತೆಗಳು ನಡೆದಿವೆ ಎಂದು ಬಸಿಲಿಕಾದ ನಿರ್ದೇಶಕರಾದ ಫಾ.ಆಲ್ಬನ್ ಡಿಸೋಜಾ ಅವರು ತಿಳಿಸಿದರು.


ಅವರು ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 45 ಹಾಗೂ ಕನ್ನಡ ಭಾಷೆಯಲ್ಲಿ 3 ಹೀಗೆ ಒಟ್ಟು 48 ದಿವ್ಯ ಬಲಿ ಪೂಜೆಗಳನ್ನು ಅರ್ಪಿಸಲಾಗುವುದು. ಜನವರಿ 26ರಂದು ಶುಕ್ರವಾರ ಅಸ್ವಸ್ಥರಿಗಾಗಿ ಹಾಗೂ ಮಕ್ಕಳಿಗಾಗಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು ಎಂದರು.
ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಬೆಳ್ತಂಗಡಿ, ಪುತ್ತೂರು, ಮಂಗಳೂರು, ಶಿವಮೊಗ್ಗ ಹಾಗೂ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಆಗಮಿಸಿ ದಿವ್ಯ ಬಲಿಪೂಜೆ ಅರ್ಪಿಸಲಿರುವರು. ಭಕ್ತರ ಸುರಕ್ಷತೆಗಾಗಿ ಬೆಸಿಲಿಕದ ಒಳಗಡೆ ಹಾಗೂ ವಠಾರದಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗಿದೆ. ಪವಾಡ ಮೂರ್ತಿ ಪ್ರತಿಷ್ಠಾಪಿಸಿದ ಪಕ್ಕದಲ್ಲಿ ಕಥೋಲಿಕ್ ಕ್ರೈಸ್ತರಿಗೆ ಪಾಪನಿವೇದನೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಭಕ್ತರು ಹೇಳಿಕೊಂಡ ಹಣದ ರೂಪದ, ವಸ್ತು ರೂಪದ ಹರಕೆ, ಮೊಂಬತ್ತಿಗಳ ಹರಕೆಗಳನ್ನು ದೇವಾಲಯದ ಎಡಬದಿಯಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಭಕ್ತರಿಗೆ ಕುಡಿಯುವ ತಂಪು ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಕಾನೂನು, ಶಿಸ್ತು ಪಾಲನೆಗಾಗಿ ಪೋಲಿಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಯಾತ್ರಾರ್ಥಿಗಳ ವಾಹನ ನಿಲುಗಡೆಯ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ಗೃಹರಕ್ಷದಳ ಹಾಗೂ ಇತರ ಸಿಬ್ಬಂದಿ ನಿರ್ವಹಿಸಲಿರುವರು. ವಾಹನ ಪಾರ್ಕಿಂಗ್ಗೂ ವ್ಯವಸ್ಥೆ ಕಲ್ಪಿಸಲಾಗಿದೆ. ತುರ್ತು ಚಿಕಿತ್ಸಾ ವಾಹನ ಹೊರತುಪಡಿಸಿ ಇತರ ವಾಹನಗಳಿಗೆ ಬಸಿಲಿಕಾ ವಠಾರಕ್ಕೆ ಪ್ರವೇಶವಿರುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಆಧ್ಯಾತ್ಮಕ ಧರ್ಮಗುರು ರೋಮನ್ ಮಸ್ಕರಸ್, ಸಹಾಯಕ ಧರ್ಮ ಗುರು ಲ್ಯಾರಿ ಪಿಂಟೋ, ಆಡಳಿತ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿ’ಸಿಲ್ವ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಪಾಲನಾ ಮಂಡಳಿಯ ಸದಸ್ಯರುಗಳಾದ ವಂದೀಶ್ ಮಥಾಯಸ್, ಪ್ರಕಾಶ್ ಪಿಂಟೋ, ರಿತೇಶ್ ಪಿಂಟೋ, ರೋಶನ್ ಸಾಲಿಸ್ ಮುಂತಾದವರು ಉಪಸ್ಥಿತರಿದ್ದರು.




