ಚೆನ್ನೈ: 41 ಜನರನ್ನು ಬಲಿ ಪಡೆದ ಕರೂರ್ ಕಾಲ್ತುಳಿತಕ್ಕೆ ನಟ, ಟಿವಿಕೆ ಸ್ಥಾಪಕ ವಿಜಯ್ ತಡವಾಗಿ ಬಂದಿದ್ದೇ ಕಾರಣ ಎಂದು ಎಫ್ಐಆರ್ ತಿಳಿಸಲಾಗಿದೆ.
ವಾಸ್ತವದಲ್ಲಿ 10 ಸಾವಿರ ಜನರನ್ನು ಸೇರಿಸಲು ಟಿವಿಕೆ ಅನುಮತಿ ಪಡೆದಿತ್ತು. ಆದರೆ ನಟ ವಿಜಯ್ ಭೇಟಿ ನೀಡಲಿದ್ದಾರೆಂಬ ಸುದ್ದಿಯ ಹಿನ್ನೆಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ರಾಜಕೀಯ ಶಕ್ತಿ ಪ್ರದರ್ಶನ ಮಾಡಲೆಂದು ವಿಜಯ್ ಉದ್ದೇಶಪೂರ್ವಕವಾಗಿ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ವಾಸ್ತವದಲ್ಲಿ ವೇಲಾಯುಧಂಪಾಲಯಂನಲ್ಲಿರುವ ಜಿಲ್ಲಾ ಗಡಿಗೆ ವಿಜಯ್ ಸಂಜೆ 4.45ಕ್ಕೇ ಆಗಮಿಸಿದ್ದರು. ಆದರೆ ನಿಗದಿತ ಸ್ಥಳಕ್ಕೆ 7.40ಕ್ಕೆ ಬಂದರು. ಇಷ್ಟೊತ್ತಿ ಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ಅಲ್ಲದೇ ಅನುಮತಿ ಇಲ್ಲದೇ ರೋಡ್ ಶೋ ಕೂಡ ನಡೆಸಲಾಯಿತು. ಜನರನ್ನು ನಿಯಂತ್ರಿಸುವುದು ಕಷ್ಟ ವಾಯಿತು. ವಿಳಂಬವಾದಷ್ಟು ಪರಿಸ್ಥಿತಿ ನಿಯಂತ್ರಣ ತಪ್ಪಬಹುದು ಎಂದು ಪೊಲೀಸರು ಟಿವಿಕೆ ನಾಯಕರಿಗೆ ಎಚ್ಚರಿಸಿದ್ದರೂ, ಅವರು ನಿರ್ಲಕ್ಷಿಸಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಸ್ಟಾಲಿನ್, ವಿಜಯ್ಗೆ ರಾಹುಲ್ ಗಾಂಧಿ ಕರೆ!
ಕರೂರ್ ದುರಂತದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಮತ್ತು ನಟ ವಿಜಯ್ ಅವರಿಗೆ ಕರೆ ಮಾಡಿದ್ದು, ಘಟನೆಗೆ ಸಂಬಂಧಿಸಿ ದಂತೆ ಮಾತುಕತೆ ನಡೆಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರಿಗೆ ಪರಿಹಾರ ತಲುಪಿರುವ ಬಗ್ಗೆ ಸ್ಟಾಲಿನ್ ಅವರ ಬಳಿ ವಿಚಾರಿಸಿರುವುದಾಗಿ ಸ್ಟಾಲಿನ್ ಟ್ವಿಟ್ ಮೂಲಕ ತಿಳಿಸಿದ್ದಾರೆ. ಇದೇ ವೇಳೆ, ಸದಾ ಡಿಎಂಕೆಯ ಮೇಲೆ ವಾಗ್ದಾಳಿ ಮಾಡುವ ವಿಜಯ್ ಅವರಿಗೂ ರಾಹುಲ್ ಕರೆ ಮಾಡಿರುವುದು ರಾಜಕೀಯವಾಗಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಡಿಎಂಕೆ ಜತೆ ಮೈತ್ರಿಯ ಹೊರ ತಾಗಿಯೂ ಕಾಂಗ್ರೆಸ್ ವಿಜಯ್ ಅವರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದೆಯೇ ಎಂಬ ಚರ್ಚೆಗಳು ಆರಂಭವಾಗಿವೆ.
ತನಿಖೆಗೆ ಎನ್ಡಿಎ 8 ಜನರ ಸಮಿತಿ: ಸಂಸದ ತೇಜಸ್ವಿಗೆ ಸ್ಥಾನ ಕಾಲ್ತುಳಿತದ ತನಿಖೆಗೆ ಎನ್ಡಿಎ ಮೈತ್ರಿಕೂಟ 8 ಜನರ ಸಮಿತಿ ರಚಿಸಿದ್ದು, ಇದರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರ ಸಂಸದ ತೇಜಸ್ವಿ ಸೂರ್ಯ ಕೂಡ ಸ್ಥಾನ ಪಡೆದಿದ್ದಾರೆ. ದುರಂತ ಸಂಭವಿಸಿದಾಗ ಸಾಮಾನ್ಯವಾಗಿ ಬಿಜೆಪಿ ತನ್ನದೇ ಸಮಿತಿ ರಚನೆ ಮಾಡುತ್ತದೆ. ಇದೇ ಮೊದಲ ಬಾರಿಗೆ ಮಿತ್ರಪಕ್ಷದ ಸಂಸದರಿಗೂ ಅವಕಾಶ ನೀಡಿದೆ.




