ಮಂಗಳೂರು: ರಾಜ್ಯ ಸರ್ಕಾರದ ಮಹತ್ವದ ʻನನ್ನ ಮೈತ್ರಿʼ ಯೋಜನೆಗೆ ಸೆ.11ರಂದು ಮಂಗಳೂರಿನಲ್ಲಿ ಚಾಲನೆ ದೊರೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರ ಆರೋಗ್ಯ ಸಂರಕ್ಷಣೆಗಾಗಿ ಸ್ಯಾನಿಟರಿ ನ್ಯಾಪ್ಕಿನ್‌ನ ಪರ್ಯಾಯವಾಗಿ ಪರಿಸರ ಸ್ನೇಹಿ ಹಾಗೂ ದೀರ್ಘ ಬಾಳಿಕೆ ಬರುವ ಋತುಸ್ರಾವ ಕಪ್ (ಮೆನ್ಸ್ಟ್ರುಯಲ್ ಕಪ್)ಗಳನ್ನು ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ. ಹಾಗಾಗಿ ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ʻನನ್ನ ಮೈತ್ರಿʼ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಹಾಗೂ ದಕ್ಷಿಣ ಕನ್ನಡ ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಯ ಒಟ್ಟು 15,000 ಮಂದಿ ವಿದ್ಯಾರ್ಥಿನಿಯರು ಮೆನ್ಸ್ಟ್ರುಯಲ್ ಕಪ್ ವಿತರಣೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಈ ಪ್ರಯೋಗ ಯಶಸ್ವಿಯಾದ ಬಳಿಕ ಉಳಿದ ಜಿಲ್ಲೆಗಳಿಗೂ ವಿತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.