ಉಡುಪಿ: ಜಿಲ್ಲೆಯಲ್ಲಿ ದೀಪಾವಳಿ ಹಬ್ಬ ಆಚರಣೆ ಸಂದರ್ಭದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಾಡುವವರು ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣ ಪತ್ರ ಪಡೆದು, ನಿಯಮಾನುಸಾರ ಮಾರ್ಗಸೂಚಿ ಪಾಲಿಸುವುದರೊಂದಿಗೆ ಯಾವುದೇ ಅನಾಹುತಗಳು ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡುವ ಕುರಿತು ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಗದಿಪಡಿಸಿರುವ ತೆರೆದ ಪ್ರದೇಶ ಗಳಲ್ಲಿ ಹೊಸದಾಗಿ ಪಟಾಕಿ ಮಾರಾಟ ಮಳಿಗೆ ತೆರೆಯುವವರಿಗೆ ಅರ್ಜಿ ಸಲ್ಲಿಸಲು ಅ. 10ರ ವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಗ್ನಿಶಾಮಕ, ಪೊಲೀಸ್ ಇಲಾಖೆ, ತಹಶೀಲ್ದಾರರ ಕಚೇರಿ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಪಡೆದ ನಿರಾಕ್ಷೇಪಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.ಮಳಿಗೆ ತೆರೆಯಲು ಅನುಮತಿ ನೀಡುವ ಮೊದಲು ತಹಶೀಲ್ದಾರರ ನೇತೃತ್ವದ ಸಮಿತಿಯು ಖುದ್ದು ಸ್ಥಳ ಪರಿಶೀಲನೆ ನಡೆಸುವುದರೊಂದಿಗೆ ಅಂಗಡಿ ಮುಂಗಟ್ಟುಗಳ ಸಮೀಪ, ಜನನಿಬಿಡ ಪ್ರದೇಶ, ಸಂಚಾರ ವ್ಯವಸ್ಥೆಗೆ ಅಡಚಣೆಯಾಗುವ ಕಡೆ ಪಟಾಕಿ ಮಳಿಗೆ ತೆರೆಯಲು ಅನುಮತಿ ನೀಡಬಾರದು ಎಂದರು.
ಜಿಲ್ಲೆಯ ಯಾವುದೇ ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ, ಆಸ್ಪತ್ರೆಗಳ ಆವರಣ ಸೇರಿದಂತೆ ಇನ್ನಿತರೆ ನಿಷೇಧಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಪಟಾಕಿ ಬಳಸುವಂತಿಲ್ಲ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗ ದಂತೆ, ಸಾರ್ವಜನಿಕರು ಆರೋಗ್ಯಕ್ಕೆ ಹಾಗೂ ಪರಿಸರ ಮಾಲಿನ್ಯಕ್ಕೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.
ಎಸಿ ರಶ್ಮಿ, ಹೆಚ್ಚುವರಿ ಎಸ್‌ಪಿ ಸುಧಾಕರ್ ನಾಯಕ್, ನಗರಸಭೆ ಆಯುಕ್ತ ಮಹಾಂತೇಶ ಹಂಗರಗಿ, ಅಧಿಕಾರಿಗಳು ಉಪಸ್ಥಿತರಿದ್ದರು.
ಹಸುರು ಪಟಾಕಿಗೆ ಮಾತ್ರ ಅವಕಾಶ
ರಾಜ್ಯ ಸರಕಾರದ ಸೂಚನೆಯಂತೆ ಹಸುರು ಪಟಾಕಿಗಳನ್ನು ಮಾತ್ರ ಬಳಸಬೇಕು. ಎಲ್ಲ ಮಳಿಗೆ, ಗೋದಾಮುಗಳಲ್ಲಿ ಹಸುರು ಪಟಾಕಿ ಹೊರತುಪಡಿಸಿ, ನಿಷೇಧಿತ ಪಟಾಕಿ ದಾಸ್ತಾನು ಮಾಡುವಂತಿಲ್ಲ. ತಾಲೂಕು ಸಮಿತಿ ಈ ಬಗ್ಗೆ ಪರಿಶೀಲನೆ ನಡೆಸಬೇಕು. ನಿಯಮಬಾಹಿರವಾಗಿ ದಾಸ್ತಾನು ಮಾಡಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಸುರು ಪಟಾಕಿಗಳ ಪ್ಯಾಕೆಟ್ ಮೇಲೆ ಪಟಾಕಿಯ ಚಿಹ್ನೆ ಹಾಗೂ ಕ್ಯೂ ಆರ್ ಕೋಡ್ ಇದ್ದು, ಇದನ್ನು ಪರಿಸರ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಹಸುರು ಪಟಾಕಿಯ ಚಿಹ್ನೆ ಇಲ್ಲದಿದ್ದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.




