ಮಂಗಳೂರು: ತಡರಾತ್ರಿಯಲ್ಲಿಯೂ ಸೌಂಡ್ ಸಿಸ್ಟಂ ಹಾಕಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮದುವೆ ಔತಣಕೂಟದ ಮನೆಯೊಂದರಿಂದ ಪೊಲೀಸರು ಸೌಂಡ್ ಸಿಸ್ಟಂ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೇ 11ರಂದು ರಾತ್ರಿ 11.30ರ ವೇಳೆಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ರಸ್ತೆಯ ಮನೆಯೊಂದರಲ್ಲಿ ಹಾಕಿರುವ ಸೌಂಡ್ ಸಿಸ್ಟಂನಿಂದ ಕಿರಿಕಿರಿಯಾಗುತ್ತಿರುವ ಬಗ್ಗೆ ಪೊಲೀಸರಿಗೆ ಸಾರ್ವಜನಿಕರೋರ್ವರು ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಮದುವೆ ಕಾರ್ಯಕ್ರಮದ ಔತಣ ಕೂಟದ ಅಂಗವಾಗಿ ಸೌಂಡ್ ಸಿಸ್ಟಂ ಹಾಕಿರುವುದು ಕಂಡುಬಂದಿದೆ. ಈ ಬಗ್ಗೆ ಮನೆಯವರಾಗಲೀ ಅಥವಾ ಸೌಂಡ್ಸ್ ಸಿಸ್ಟಂ ನ ನಿರ್ವಾಹಕರಾಗಲಿ ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆದಿರಲಿಲ್ಲ. ಅಲ್ಲದೆ ನಿಗದಿತ ಕಾಲಮಿತಿಯ ಅನಂತರವೂ ಸೌಂಡ್ ಸ್ಪೀಕರ್ ಬಳಸಿ ಸಾರ್ವಜನಿಕರ ಶಾಂತಿಗೆ ಭಂಗ ಉಂಟಾಗಿದ್ದರಿಂದ ಸೌಂಡ್ ಸ್ಪೀಕರ್, ಕೇಬಲ್ ಅನ್ನು ಪೊಲೀಸರು ವಶಪಡಿಸಿಕೊಂಡರು.




