ತೆಲಂಗಾಣ: ಗರ್ಭದಲ್ಲಿರುವ ಮಗುವಿನ ತಂದೆ ಯಾರು ಎಂಬ ಬಗ್ಗೆ ಪತಿ ಪದೇ ಪದೇ ಸಂಶಯ ವ್ಯಕ್ತಪಡಿಸಿ, ಡಿಎನ್‌ಎ (DNA) ಪರೀಕ್ಷೆ ನಡೆಸುವಂತೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮನನೊಂದ ಗರ್ಭಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಮೆದಕ್ ಜಿಲ್ಲೆಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಜಿ. ಸುಶ್ಮಿತಾ (23) ಎಂದು ಗುರುತಿಸಲಾಗಿದೆ. ಸುಮಾರು 18 ತಿಂಗಳ ಹಿಂದೆ ಗಡಿಪೆದ್ದಾಪುರ ಗ್ರಾಮದ ಜಿ. ಅಭಿಲಾಶ್ ಅವರೊಂದಿಗೆ ಸುಷ್ಮತಾ ವಿವಾಹವಾಗಿದ್ದರು. ಆತ್ಮಹತ್ಯೆ ನಡೆದ ಸಂದರ್ಭದಲ್ಲಿ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ.
ಸೀಮಂತದ ವಿಚಾರದಲ್ಲಿ ಗಲಾಟೆ:
ಸುಶ್ಮಿತಾ ಅವರ ತಾಯಿ ನೀಡಿರುವ ದೂರಿನ ಪ್ರಕಾರ, ಆರೋಪಿ ಅಭಿಲಾಷ್ ತನ್ನ ಮಗಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಲ್ಲದೆ, ಆಕೆಯ ನಡತೆಯ ಬಗ್ಗೆ ಪದೇ ಪದೇ ಶಂಕೆ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಈ ಕಿರುಕುಳಕ್ಕೆ ಆತನ ತಾಯಿಯೂ ಸಾಥ್ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜೂನ್ 23 ರಂದು ಸುಶ್ಮಿತಾ ಅವರ ಕುಟುಂಬಸ್ಥರು ಮಗಳ ಸೀಮಂತ ಕಾರ್ಯಕ್ರಮದ ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಅಳಿಯನ ಮನೆಗೆ ಹೋಗಿದ್ದರು. ಈ ವೇಳೆ ಅಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಗರ್ಭದಲ್ಲಿರುವ ಮಗು ತನ್ನದೇ ಎಂಬುದನ್ನು ಸಾಬೀತುಪಡಿಸಲು ಡಿಎನ್ಎ ಪರೀಕ್ಷೆ ಮಾಡಿಸಬೇಕು ಎಂದು ಅಭಿಲಾಷ್ ಹಠ ಹಿಡಿದಿದ್ದ ಎನ್ನಲಾಗಿದೆ. ಆ ಸಮಯದಲ್ಲಿ ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.
ಆದರೆ, ಈ ಘಟನೆ ನಡೆದ ಎರಡೇ ದಿನಗಳಲ್ಲಿ (ಜೂನ್ 25) ಸುಶ್ಮಿತಾ ಪತಿಯ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಪತಿ ಹಾಗೂ ಅತ್ತೆಯ ಸತತ ಅಪಮಾನ ಮತ್ತು ಮಾನಸಿಕ ಕಿರುಕುಳವೇ ಆಕೆ ಈ ಕಠಿಣ ನಿರ್ಧಾರ ಕೈಗೊಳ್ಳಲು ಕಾರಣ ಎಂದು ತವರು ಮನೆಯವರು ಆರೋಪಿಸಿದ್ದಾರೆ.
ಮೃತರ ಕುಟುಂಬದ ದೂರಿನ ಮೇರೆಗೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 85, ಸೆಕ್ಷನ್ 108 ಹಾಗೂ ಸಮಾನ ಉದ್ದೇಶದ ಇತರ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಅಭಿಲಾಷ್ ಮತ್ತು ಆತನ ತಾಯಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.




