ದೇಗುಲಗಳಲ್ಲಿ ಗೋಶಾಲೆ, ಧರ್ಮ ಬೋಧನಾ ಸಂಸ್ಥೆ, ಆಸ್ಪತ್ರೆ ಅಗತ್ಯ: ಕೇರಳ ರಾಜ್ಯಪಾಲ

Share with

ಕಣ್ಣೂರು: ಕೇರಳದ ಪ್ರತಿಯೊಂದು ದೇವಾಲಯದಲ್ಲಿ ಗೋಶಾಲೆ, ಸನಾತನ ಧರ್ಮವನ್ನು ಬೋಧಿಸುವ ಸಂಸ್ಥೆ ಮತ್ತು ಆಸ್ಪತ್ರೆಯನ್ನು ಸ್ಥಾಪಿಸಲು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕ‌ರ್ ಅವರು ಕರೆ ನೀಡಿದ್ದಾರೆ. ದೇವಸ್ವಂ ಮಂಡಳಿಗಳು ಇದನ್ನು ಕಾರ್ಯಗತಗೊಳಿಸಬಹುದು ಎಂದು ಸೂಚಿಸಿದ್ದಾರೆ.

ತಲಿಪರಂಬದ ಶ್ರೀ ರಾಜರಾಜೇಶ್ವರ ದೇವಸ್ಥಾನದಲ್ಲಿ ಶಿವನ ಕಂಚಿನ ವಿಗ್ರಹವನ್ನು ಅನಾವರಣಗೊಳಿಸಿದ ನಂತರ ಮಾತನಾಡಿದ ಅರ್ಲೇಕರ್, ಎಲ್ಲ ದೇವಾಲಯಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.

ಬೀದಿಗಳಲ್ಲಿ ಅಲೆದಾಡುವ ಎಲ್ಲ ಜಾನುವಾರುಗಳನ್ನು ಪೋಷಿಸಲು ನಮ್ಮ ಎಲ್ಲ ದೇವಾಲಯಗಳು ಒಂದು ‘ಗೋಶಾಲೆ’ ಹೊಂದಿರಬೇಕು. ಅದು ನಮ್ಮ ಪ್ರಮುಖ ಕರ್ತವ್ಯ. ‘ಗೋಶಾಲೆ’ ನಿರ್ಮಿಸಿಕೊಡಲು ಸಿದ್ಧರಿರುವ ಅನೇಕ ಜನರಿದ್ದಾರೆ ಎಂದು ಹೇಳಿದ್ದಾರೆ.

ದೇವಾಲಯದಲ್ಲಿ ಸನಾತನ ಧರ್ಮ ಬೋಧಿಸುವ ಒಂದು ಶಿಕ್ಷಣ ಸಂಸ್ಥೆ ಇರಬೇಕು. ಅದು ಅತ್ಯಗತ್ಯ. ಇಲ್ಲದಿದ್ದರೆ, ಮುಂದಿನ ಪೀಳಿಗೆಗೆ ನಮ್ಮ ಸನಾತನ ಧರ್ಮದ ಬೋಧನೆಗಳು ಮತ್ತು ಉಪದೇಶಗಳನ್ನು ಯಾರು ನೀಡುತ್ತಾರೆ? ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.

ಮಾನವ ಸೇವೆ.. ಮಾಧವ ಸೇವೆ’ (ಮಾನವರ ಸೇವೆ ದೇವರ ಸೇವೆ) ಎಂದೂ ಹೇಳಿರುವ ಅವರು, ಆ ಕಾರಣದಿಂದ ದೇವಾಲಯಗಳಲ್ಲಿ ಆಸ್ಪತ್ರೆ ಸೌಲಭ್ಯವೂ ಇರಬೇಕು. ರೋಗಿಗೆ ಸೇವೆ ಮಾಡಬೇಕು. ಈ ಮೂರು ಕೆಲಸಗಳನ್ನು ದೇವಸ್ವಂ ಮಂಡಳಿಯಿಂದ ಮಾಡಬಹುದು ಎಂದು ತಿಳಿಸಿದ್ದಾರೆ.

‘ನಾವು ಕೇಳಿದರೆ ಕೆಲವು ಜನರು ಏನು ಬೇಕಾದರೂ ದಾನ ಮಾಡಲು ಸಿದ್ಧರಿದ್ದಾರೆ. ನಾವು ಅವರ ಬಳಿಗೆ ಹೋಗಬೇಕು. ಇಂದು ನಮಗೆ ಬೇಕಾಗಿರುವುದು ಇದೇ. ದೇವಾಲಯಗಳಿಗೆ ಏನೇ ಬಂದರೂ, ಅದನ್ನು ಮತ್ತೆ ಸಾರ್ವಜನಿಕರಿಗೆ, ಸಮಾಜಕ್ಕೆ ನೀಡಬೇಕು. ಯಾವ ರೂಪದಲ್ಲಿ ಅಂದರೆ, ‘ಗೋಶಾಲೆ’, ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ ಅಥವಾ ವೈದ್ಯಕೀಯ ಸೌಲಭ್ಯ ಒದಗಿಸುವ ಮೂಲಕ’ ಎಂದು ಅವರು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *