ಉದ್ದಿಮೆದಾರರನ್ನು ಉತ್ತೇಜಿಸಲು ಕೇಂದ್ರ ಸರ್ಕಾರದಿಂದ ನಡೆಸಲಾಗುತ್ತಿರುವ ಹಲವು ಸ್ಕೀಮ್ಗಳಲ್ಲಿ ಪಿಎಂ ಸ್ವನಿಧಿ ಯೋಜನೆಯೂ (PM SVANidhi Scheme) ಒಂದು. ಇದು ಬೀದಿಬದಿ ವ್ಯಾಪಾರಿಗಳನ್ನು (street vendors) ಗಮನದಲ್ಲಿಟ್ಟುಕೊಂಡು ಸರ್ಕಾರದಿಂದ ಅಡಮಾನರಹಿತವಾಗಿ ನೀಡುವ ಕಿರುಸಾಲ (micro finance) ಯೋಜನೆ. 2020ರಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ಸ್ಕೀಮ್ ಆರಂಭಿಸಿದೆ. ಬಹಳ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಇದು.
2030ರವರೆಗೂ ಪಿಎಂ ಸ್ವನಿಧಿ ಯೋಜನೆ ವಿಸ್ತರಣೆ
2020ರಲ್ಲಿ ಆರಂಭವಾದ ಪಿಎಂ ಸ್ವನಿಧಿ ಯೋಜನೆ ಮೊದಲಿಗೆ 2024ರ ಡಿಸೆಂಬರ್ 31ರವರೆಗೂ ಎಂದು ನಿಗದಿ ಮಾಡಲಾಗಿತ್ತು. ಆದರೆ, ಈ ಯೋಜನೆಯಿಂದ ಬೀದಿಬದಿ ವ್ಯಾಪಾರಿಗಳಿಗೆ ಸಾಕಷ್ಟು ಲಾಭವಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆರು ವರ್ಷ ವಿಸ್ತರಣೆ ಮಾಡಲಾಗಿದೆ. 2030ರ ಡಿಸೆಂಬರ್ 31ರವರೆಗೂ ಪಿಎಂ ಸ್ವನಿಧಿ ಸ್ಕೀಮ್ ಇರಲಿದೆ.
ಪಿಎಂ ಸ್ವನಿಧಿ ಯೋಜನೆ: ಎಷ್ಟು ಸಿಗುತ್ತೆ ಸಾಲ?
ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಸ್ಕೀಮ್ ಅಡಿಯಲ್ಲಿ ಮೊದಲ ಬಾರಿಗೆ ಸಾಲ ಪಡೆಯುವಾಗ 10,000 ರೂ ಸಿಗುತ್ತದೆ. ಇದನ್ನು ತೀರಿಸಿದರೆ, ನಂತರ 20,000 ರೂ ಹಾಗೂ 50,000 ರೂವರೆಗೂ ಸಾಲ ಪಡೆಯಬಹುದು. ಈ ಕಿರುಸಾಲಗಳಿಗೆ ಶೇ. 7ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ. ದೇಶಾದ್ಯಂತ ಒಟ್ಟು ಒಂದು ಕೋಟಿಗೂ ಅಧಿಕ ಮಂದಿ ಹಾಗೂ ಅವರ ಬ್ಯುಸಿನೆಸ್ಗಳಿಗೆ ಈ ಸಾಲದಿಂದ ಉಪಯೋಗವಾಗುವ ನಿರೀಕ್ಷೆ ಇದೆ.





