ವೀಕ್ಷಕವಾಣಿ: ಮುಂಗಾರು ಮಳೆ ಇಡೀ ಜೀವ ಜಗತ್ತಿಗೆ ಹೊಸತನವನ್ನು ತರುತ್ತದೆ. ಮನುಷ್ಯರಿಂದ ಹಿಡಿದು ಪ್ರತಿಯೊಂದು ಪ್ರಾಣಿಯೂ ಕೂಡ ಮೊದಲ ಮಳೆ ಮೈ ಚುಂಬಿಸುತ್ತಿದ್ದಂತೆ ಖುಷಿಯಿಂದ ತೇಲಾಡುತ್ತವೆ. ಅದೇ ರೀತಿ ಮುಂಗಾರಿಗೆ ಸಮುದ್ರ ಹಳ್ಳ ಕೊಳ್ಳಗಳು ತುಂಬಿ ತುಳುಕುತ್ತಿದ್ದಂತೆ ಅದರಲ್ಲಿರುವ ಮೀನುಗಳು ಬೇರೆಡೆ ವಲಸೆ ಹೋಗಲು ಮುಂದಾಗುತ್ತವೆ. ನೀರಿನ ಹರಿಯುವಿಕೆಯ ವಿರುದ್ಧವಾಗಿ ಸಾಗುವ ಈ ಮೀನುಗಳು ಅನೇಕರ ಬಾರಿ ಗುರಿ ಸೇರಲಾಗದೇ ಮನುಷ್ಯನ ಹೊಟ್ಟೆ ಸೇರುತ್ತವೆ. ಇದೇ ಸಮಯದಲ್ಲಿ ಮೀನುಗಳು ಸಂತಾನೋತ್ಪಿ ಕ್ರಿಯೆಯನ್ನು ಶುರು ಮಾಡುತ್ತವೆ. ಸ್ವಚ್ಛ ನೀರನ್ನು ಅರಸಿ ನೀರಿನ ವಿರುದ್ಧ ಹರಿಯುವ ಇವುಗಳು ಪ್ರಕೃತಿಯ ವಿಶಿಷ್ಟ ವೈಚಿತ್ರದಂತೆ ನೋಡುಗರಿಗೆ ಭಾಸವಾಗುತ್ತದೆ.
ಕೇರಳದ ಕೊಚ್ಚಿ ಪೋರ್ಟ್ ಬಳಿ ಮೀನುಗಳು ನೀರಿನಿಂದ ಚಿಮ್ಮಿ ನೆಲಕ್ಕೆ ಬೀಳುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಕೆಲ ದಿನಗಳ ಹಿಂದೇ ಈ ಘಟನೆ ನಡೆದಿದ್ದು, ಈಗ ವೀಡಿಯೋ ವೈರಲ್ ಆಗುತ್ತಿದೆ. ಪೋರ್ಟ್ ಕೊಚ್ಚಿ ಬೀಚ್ ಬಳಿ ಮೀನುಗಳು ನೀರಿನಿಂದ ಮೇಲಕ್ಕೆ ಚಿಮ್ಮಿ ತೀರಕ್ಕೆ ಬೀಳುತ್ತಿದ್ದು, ಜನ ಓಡಿ ಬಂದು ಬಿಟ್ಟಿ ಸಿಕ್ಕ ಮೀನನ್ನು ಬುಟ್ಟಿ, ಚೀಲ,ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿಕೊಳ್ಳುತ್ತಿದ್ದರು.