ಮಂಗಳೂರು: ಸಂವಿಧಾನದ ಮೂಲ ಅಂಶಗಳಾದ ಧರ್ಮನಿರಪೇಕ್ಷತೆ, ಜಾತ್ಯಾತೀತತೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವೆಲ್ಲರೂ ಗೌರವಿಸಿ ದೇಶದ ಘನತೆ ಹಾಗೂ ಸಾರ್ವಭೌಮತೆಯನ್ನು ಎತ್ತಿ ಹಿಡಿಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಹೇಳಿದರು.


ಅವರು ಜ.26ರಂದು ನಗರದ ನೆಹರು ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ 75ನೇ ಗಣರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಸಂವಿಧಾನದ ಆಶಯಗಳನ್ನು ಜಾರಿ ಮಾಡಲು ನಾವೆಲ್ಲರೂ ಸಿದ್ಧರಾಗಬೇಕು. ಸಂವಿಧಾನದ ಆಶಯ ಜಾರಿಯಾದರೆ ಅದೇ ಮಹಾತ್ಮಗಾಂಧಿ ಆಶಿಸಿದ ನಿಜವಾದ ರಾಮರಾಜ್ಯ. ರಾಮರಾಜ್ಯದ ನೈಜ ಪರಿಕಲ್ಪನೆಯೇ ಜನಾನುರಾಗಿ ಆಡಳಿತ. ನಾವು ಅಧಿಕಾರಕ್ಕೆ ಬಂದು ಕೇವಲ ಏಳು ತಿಂಗಳಲ್ಲಿ ಐದೂ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.
ಸಂವಿಧಾನ ಸ್ಥಾಪನೆಯಾದ 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತೀಯರಾದ ನಮ್ಮೆಲ್ಲರ ಮೇಲೆ ಸಂವಿಧಾನ ರಕ್ಷಿಸುವ ಮಹತ್ವದ ಜವಾಬ್ದಾರಿಯಿದೆ. ಭಾರತದ ಸಂವಿಧಾನವನ್ನು ಒಪ್ಪಿಕೊಂಡ ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಒಕ್ಕೂಟ ವ್ಯವಸ್ಥೆ ನಿಂತಿರುವುದೇ ಪರಸ್ಪರ ಸಹಕಾರ ಮತ್ತು ಹೊಂದಿಕೊಂಡು ಹೋಗುವ ಗುಣಗಳಿಂದ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳಿಗೂ ಸಮಾನ ಹಕ್ಕಿದೆ. ಸಮಾನ ಕರ್ತವ್ಯಗಳಿವೆ. ಇವುಗಳಲ್ಲಿ ತಾರತಮ್ಯವಾದರೆ ಇಡೀ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬೀಳಲಿದೆ. ಹಾಗಾಗಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗದ ರೀತಿ ಎಚ್ಚರ ವಹಿಸಬೇಕೆಂದು ಎಂದರು.
ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಕುಮಾರ್, ಡಾ.ಮಂಜುನಾಥ ಭಂಡಾರಿ, ಮ.ನ.ಪಾ ಮೇಯರ್ ಸುಧೀರ್ ಶೆಟ್ಟಿ, ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಅಮಿತ್ ಸಿಂಗ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ ಕೆ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮ.ನ.ಪಾ ಆಯುಕ್ತ ಆನಂದ ಸಿ.ಎಲ್ ಮೊದಲಾದವರು ಉಪಸ್ಥಿತರಿದ್ದರು.




