ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂಕಷ್ಟ,ತುರ್ತು ಓಡಾಟ ಅನುಮತಿಗೆ ಶಾಸಕರು

Share with

ಬಂಟ್ವಾಳ :  ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ  ಮಂಗಳೂರು ಲೋಕೋಪಯೋಗಿ ಇಲಾಖೆಯಡಿಯಲ್ಲಿ ಬರುವ ಅಡ್ಡೂರು ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ತನ್ನ ಸಾಮಾರ್ಥ್ಯವನ್ನು ಕಳೆದುಕೊಂಡ ಕಾರಣ ಘನವಾಹನ ಸಂಚಾರ ನಿಷೇಧಿಸಿ ದ..ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅದೇಶ ನೀಡಿದ್ದರು.
ಹಳೆ ಸೇತುವೆಗಳ ದುರಸ್ತಿ ಅಥವಾ ಹೊಸ ಸೇತುವೆ ನಿರ್ಮಾಣ ಹಿನ್ನೆಲೆಯಲ್ಲಿ ಅಡ್ಡೂರ ಸೇತುವೆಯಲ್ಲಿ ಸಂಚಾರ  ನಿಷೇಧಗೊಳಿಸಿ ಆದೇಶ ಹೊರಡಿಸಿರುವ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರೊಂದಿಗೆ ಆ. ೧೬ರಂದು ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಅವರು ಡೀಸಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿ, ಪರ್ಯಾಯ ವ್ಯವಸ್ಥೆ ಬಗ್ಗೆ ಚರ್ಚಿಸಿದರು.


ಮುಖ್ಯವಾಗಿ ಅಡ್ಡೂರು   ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ, ದೂರದ ರಸ್ತೆಗಳಲ್ಲಿ ಸುತ್ತುಬಳಸಿ ವಾಹನ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು, ಭಕ್ತಾದಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಇದಕ್ಕೆ ಪರ್ಯಾಯವಾಗಿ ಸೇತುವೆಗಳಲ್ಲಿ ಶಾಲಾ-ಕಾಲೇಜುಗಳ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆಯೂ ಸಲಹೆ ಸೂಚನೆ ನೀಡಿದರು.

  ಸೇತುವೆಯ ಎರಡೂ ಕಡೆಯಲ್ಲಿ ಬಸ್ ಸೇವೆಗೆ ಅವಕಾಶ ಮಾಡಿಕೊಟ್ಟರೆ ಪ್ರಯಾಣಿಕರ ಸಮಸ್ಯೆಗೆ ಒಂದಷ್ಟು ಪರಿಹಾರ ನೀಡಿದಂತಾಗುತ್ತದೆ ಎಂದು ಸಂಸದ-ಶಾಸಕರ ನಿಯೋಗ ಡೀಸಿಯವರಿಗೆ ಮನವರಿಕೆ ಮಾಡಿದರು.

ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಹಳೆ ಅಥವಾ ಶಿಥಿಲ ಸೇತುವೆಗಳಲ್ಲಿ ಲಾರಿಗಳ ಸಹಿತ ಇತರ ಘನ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಯವರು ಭರವಸೆ ನೀಡಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಕ್ರಮವಹಿಸುತ್ತದೆ. ಸೇತುವೆ ಎರಡು ಬದಿಗಳಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗುತ್ತದೆ. ಎರಡು ಬದಿಗಳಿಂದ  ಬಸ್ ಗಳ ವ್ಯವಸ್ಥೆಗೆ  ಆರ್.ಟಿ.ಓ‌.ಗೆ ನಾಳೆ ಸಭೆ ಕರೆದು ತಿಳಿಸಲಾಗುತ್ತದೆ.  ಅಗತ್ಯವಿರುವ ಪ್ರಯಾಣಿಕರು  ಸೇತುವೆ ಮೂಲಕ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗುವುದಕ್ಕೆ ಬೇಕಾಗಿ  ಮಿನಿ ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
  *ಮತ್ತೆ ತಜ್ಞರು ಬೇಟಿ*
  ಸೇತುವೆಯ ಸಾಮರ್ಥ್ಯದ ಬಗ್ಗೆ ತಜ್ಞರು ನೀಡಿದ ಸಲಹೆಯನ್ನು ಅನುಸರಿಸಿ ಸಾರ್ವಜನಿಕ ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ವಹಿಸಲಾಗಿದೆ.
  ಮತ್ತೆ ಮುಂದಿನ ತಿಂಗಳು ನೀರಿನ ಮಟ್ಟ ಕಡಿಮೆಯಾದ ಕೂಡಲೇ ಸೇತುವೆ ಸಾಮರ್ಥ್ಯ ಪರಿಶೀಲನೆಗಾಗಿ ತಜ್ಞರು ಬೇಟಿ ನೀಡಿ ವರದಿ ನೀಡಲಿದ್ದಾರೆ. ವರದಿಯನ್ನು ಆಧಾರವಾಗಿಟ್ಟುಕೊಂಡು ಮುಂದಿನ ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಭೆಯಲ್ಲಿ  ಅಪರ ಜಿಲ್ಲಾಧಿಕಾರಿ(ಎಡಿಸಿ)  ಸಂತೋಷ್ ಹಾಗೂ ಎಕ್ಸಿಕ್ಯುಟಿವ್ ಇಂಜಿನಿಯರ್ ಅಮರನಾಥ್  ಸಂಬಂಧಪಟ್ಟ ಇತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *