
ಮಹಾಲಿಂಗಪುರ: ಮಂಗಳವಾರ ಸಂಜೆ ಕಾಶ್ಮೀರದ ಪೂಂಛ್‌ನಲ್ಲಿ ಕರ್ತವ್ಯಕ್ಕೆ ಹೋಗುವಾಗ ಸೇನಾ ವಾಹನ ಕಂದಕಕ್ಕೆ ಉರುಳಿ ಮೃತಪಟ್ಟ ಐವರು ಯೋಧರಲ್ಲಿ ಮಹಾಲಿಂಗಪುರ ಪಟ್ಟಣದ ಕೆಂಗೇರಿಮಡ್ಡಿಯ ಮಹೇಶ ನಾಗಪ್ಪ ಮರೆಗೊಂಡ(25) ಒಬ್ಬರು.

ಹುತಾತ್ಮ ಯೋಧ ಮಹೇಶನ ಕಥೆಯನ್ನು ಕೇಳಿದರೇ ಎಂಥವರದು ಕರಳು ಚುರುಕ್ ಎನ್ನುವಂತಿದೆ. ಕೇವಲ 25ನೇ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ ಯೋಧನ ಬಾಳಲ್ಲಿ ನಡೆದ ವಿಧಿಯಾಟಕ್ಕೆ ಪಟ್ಟಣದ ಜನತೆಯು ಮಮ್ಮಲ ಮರುಗತ್ತಿದ್ದರೇ, ಕುಟುಂಬಸ್ಥರು, ಸಂಬಂಧಿಕರು ಕಣ್ಣಿರ ಕಡಲಲ್ಲಿ ಮುಳುಗಿದ್ದಾರೆ.
ಚಿಕ್ಕಂದಿನಲ್ಲೆ ತಂದೆ ಕಳೆದುಕೊಂಡ ನತದೃಷ್ಟ :
ಹುತಾತ್ಮ ಯೋಧ ಚಿಕ್ಕಂದಿನಲ್ಲೇ 13 ವರ್ಷದವರಿಂದಾಗಲೇ ತಂದೆಯನ್ನು ಕಳೆದುಕೊಂಡ ನತದೃಷ್ಟ. ತಂದೆಯ ಸಾವಿನ ನಂತರ ತಾಯಿ ಶಾರದಾ ಅವರ ಕೂಲಿ ಕೆಲಸ ಮಾಡುತ್ತಾ ಮಗನನ್ನು ಪಿಯುಸಿವರೆಗೆ ಶಿಕ್ಷಣ ಕೊಡಿಸಿದ್ದಾರೆ. ಮಹೇಶನ ಶೈಕ್ಷಣಿಕ ಬದುಕಿಗೆ ತಾಯಿಯ ಸಹೋದರರಾದ ಮಾವಂದಿರು, ಅಜ್ಜಿ(ತಾಯಿಯ ತಾಯಿ)ಯು ಮಹೇಶನ ಶಿಕ್ಷಣ ಮತ್ತು ಜೀವನಕ್ಕೆ ಸಹಕಾರ ನೀಡಿದ್ದಾರೆ.
6 ವರ್ಷಗಳ ಹಿಂದೆ ದೇಶ ಸೇವೆಗೆ :
ಅತ್ಯಂತ ಸೌಮ್ಯಸ್ವಭಾವದ ಮಹೇಶ ತಾಯಿ ಮತ್ತು ಮಾವಂದಿರ ಆಶ್ರಯದಲ್ಲಿ ಬೆಳೆದ. ಚಿಕ್ಕಂದಿನಿಂದಲೇ ದೇಶಸೇವೆ ಮಾಡುವ ಸಂಕಲ್ಪದೊಂದಿಗೆ ಪ್ರಯತ್ನಿಸಿ ತನ್ನ 19ನೇ ವಯಸ್ಸಿನಲ್ಲಿಯೇ ಬೆಳಗಾವಿ 11ನೇ ಮರಾಠಾ ಲೈಟ್ ಇನ್‌ಪೆಂಟರಿ ರೆಜಿಮೆಂಟ್‌ನ ಸೈನಿಕನಾಗಿ ಆಯ್ಕೆಯಾಗಿ ಸೇವೆ ಕಳೆದ 6 ವರ್ಷಗಳಿಂದ ದೇಶಸೇವೆಯಲ್ಲಿದ್ದನು.




