ನಕ್ಸಲ್ ಲಕ್ಷ್ಮೀ ತೊಂಬಟ್ಟು ಉಡುಪಿಯಲ್ಲಿ ಶರಣು

Share with

ರಾಜ್ಯದಲ್ಲಿ ನಕ್ಸಲ್ ಶರಣಾಗತಿ ಪ್ರಕ್ರಿಯೆ ಮುಂದುವರೆದಿದೆ. ನಿನ್ನೆಯಷ್ಟೇ ನಕ್ಸಲ್ ರವೀಂದ್ರ ಶರಣಾಗಿದ್ದರು. ಈ ಬೆನ್ನಲ್ಲೇ ಕಳೆದ 2 ದಶಕದ ಹಿಂದೆ ನಾಪತ್ತೆಯಾಗಿದ್ದ ಕುಂದಾಪುರ ತಾಲೂಕಿನ ತೊಂಬಟ್ಟುವಿನ ನಕ್ಸಲ್ ಲಕ್ಷ್ಮೀ ಇಂದು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿಯಲ್ಲಿ ಶರಣಾಗಿದ್ದಾರೆ. ಈ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ನಕ್ಸಲ್ ಹೋರಾಟಗಾರ್ತಿ ಸಮಾಜದ ಮುಖ್ಯವಾಹಿನಿಗೆ ಆಗಮಿಸಿದ್ದಾರೆ. ಇದರೊಂದಿಗೆ ಕರ್ನಾಟಕ ನಕ್ಸಲ್ ಹೋರಾಟ ಮುಕ್ತ ರಾಜ್ಯವೆಂದು ಘೋಷಿಸಲಾಗಿದೆ.

ಲಕ್ಷ್ಮೀ ಮೇಲೆ ಶಂಕರನಾರಾಯಣ/ಅಮಾಸೆಬೈಲ್‌ ಪೊಲೀಸ್‌ ಠಾಣೆಯಲ್ಲಿ ಮೂರು ಪ್ರಕರಣಗಳಿವೆ. ಇದನ್ನು ಹೊರತುಪಡಿಸಿ ಬೇರೆಲ್ಲೂ ಇವಳ ಮೇಲೆ ಪ್ರಕರಣ ಇಲ್ಲ ಎಂದು ತಿಳಿದು ಬಂದಿದೆ.

ಲಕ್ಷ್ಮೀ ಪ್ರಸ್ತುತ ಆಂಧ್ರ ಪ್ರದೇಶದಲ್ಲಿ ಗಂಡನ ಜತೆ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾಳೆ. ಗಂಡ ಕೂಡ ನಕ್ಸಲ್‌ ಆಗಿದ್ದು, ಮುಖ್ಯವಾಹಿನಿಗೆ ಬಂದಿದ್ದರು ಎಂಬ ಮಾಹಿತಿಯೂ ಇದೆ.

ಲಕ್ಷ್ಮೀ ಸುಮಾರು 15 ವರ್ಷಗಳಿಂದ ಕುಟುಂಬದವರಿಂದ ಸಂಪರ್ಕ ಕಳೆದುಕೊಂಡಿದ್ದಾಳೆ. ಭೂಗತವಾಗಿ ನಕ್ಸಲ್ ಚಟುವಟಿಕೆಯಲ್ಲಿ ಇದ್ದಳು ಎಂಬ ಮಾಹಿತಿಯಿದೆ. ಆದರೆ ಮಂಡಗಾರು ಲತಾ, ವಿಕ್ರಂ ಗೌಡ ತಂಡದ ರೀತಿಯಲ್ಲಿ ಹಾರ್ಡ್‌ಕೋರ್‌ ನಕ್ಸಲ್‌ ಆಗಿ ಲಕ್ಷ್ಮೀ ಹೆಸರು ಕೇಳಿ ಬಂದಿರಲಿಲ್ಲ. ಆಕೆ ಭೂಗತವಾಗಿದ್ದಳು ಎಂಬ ಮಾಹಿತಿ ಹೊರತುಪಡಿಸಿ ಹೆಚ್ಚಿನ ಯಾವುದೇ ಮಾಹಿತಿಯೂ ಲಭ್ಯವಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.


Share with