ಅಹಮದಾಬಾದ್: ಅಹಮದಾಬಾದ್ ವಿಮಾನ ಪತನವಾದ ಕೆಲವೇ ದೂರದಲ್ಲಿ ನಿರ್ದೇಶಕರೊಬ್ಬರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಕುಟುಂಬಸ್ಥರು ಡಿಎನ್ಎ ಮಾದರಿಯನ್ನು ಸಲ್ಲಿಸಿದ್ದಾರೆ.

ನರೋಡಾ ನಿವಾಸಿ ಮಹೇಶ್ ಕಲಾವಾಡಿಯಾ (ಮಹೇಶ್ ಜಿರಾವಾಲಾ) ವಿಮಾನ ಪತನವಾದ ಸಮೀಪದ ಲಾ ಗಾರ್ಡನ್ ಪ್ರದೇಶದಲ್ಲಿ ಮಧ್ಯಾಹ್ನ ಒಬ್ಬರನ್ನು ಭೇಟಿ ಆಗಲು ತೆರಳಿದ್ದರು. ಇದೇ ವೇಳೆ ವಿಮಾನ ಪತನವಾಗಿದೆ ಎಂದು ವರದಿ ತಿಳಿಸಿದೆ.
“ನನ್ನ ಪತಿ ಮಧ್ಯಾಹ್ನ 1.14ಕ್ಕೆ ನನಗೆ ಕರೆ ಮಾಡಿ, ಅವರ ಜತೆ ಮೀಟಿಂಗ್ ಮುಗಿದಿದೆ. ಮನೆಗೆ ಹೋಗುತ್ತಿದ್ದೇನೆ ಎಂದಿದ್ದರು. ಆದರೆ, ಅವರು ಹಿಂತಿರುಗದಿದ್ದಾಗ, ನಾನು ಅವರ ಫೋನ್ಗೆ ಕರೆ ಮಾಡಿದೆ. ಆದರೆ ಅದು ಸ್ವಿಚ್ ಆಫ್ ಆಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅವರ ಮೊಬೈಲ್ ಫೋನ್ನ ಕೊನೆಯ ಲೊಕೇಶನ್ ಅಪಘಾತದ ಸ್ಥಳದಿಂದ 700 ಮೀಟರ್ ದೂರದಲ್ಲಿದೆ ಅಂಥ ತೋರಿಸಿತ್ತು” ಎಂದು ಮಹೇಶ್ ಪತ್ನಿ ಹೇತಲ್ ಹೇಳಿದ್ದಾರೆ.
“ಮಧ್ಯಾಹ್ನ 1:40 ರ ಸುಮಾರಿಗೆ (ವಿಮಾನ ಹಾರಾಟ ನಡೆಸಿದ ಒಂದು ನಿಮಿಷದ ನಂತರ) ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಅವರ ಸ್ಕೂಟರ್ ಮತ್ತು ಮೊಬೈಲ್ ಫೋನ್ ಕಾಣೆಯಾಗಿದೆ. ಅವರು ಮನೆಗೆ ಬರಲು ಆ ಮಾರ್ಗವನ್ನು (ಕೊನೆಯ ಸ್ಥಳದ ಪ್ರಕಾರ) ಎಂದಿಗೂ ಬಳಸುತ್ತಿರಲಿಲ್ಲವಾದ್ದರಿಂದ ಇದೆಲ್ಲವೂ ಅಸಹಜವಾಗಿದೆ. ಅಪಘಾತವಾದಾಗ ಅಕ್ಕಪಕ್ಕದಲ್ಲಿದ್ದವರು ಸಾವನ್ನಪ್ಪಿದ್ದಾರೆ. ಇದರಲ್ಲಿ ಅವರು ಕೂಡ ಇದ್ದಾರೆಯೇ ಎಂದು ಪರಿಶೀಲಿಸಲು ನಾವು ಡಿಎನ್ಎ ಮಾದರಿಗಳನ್ನು ಸಲ್ಲಿಸಿದ್ದೇವೆ” ಎಂದು ಪತ್ನಿ ಹೇಳಿದ್ದಾರೆ.
ಮಹೇಶ್ ಕೆಲ ಮ್ಯೂಸಿಕ್ ಆಲ್ಬಂಗಳನ್ನು ನಿರ್ದೇಶನ ಮಾಡಿದ್ದಾರೆ.
ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನ ಘಟನೆಯಲ್ಲಿ 270 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತನ್ನವರನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿನಲ್ಲಿ ದಿನದೂಡುತ್ತಿದ್ದಾರೆ.
ವಿಮಾನ ಅಪಘಾತದಲ್ಲಿ ಮೃ*ತಪಟ್ಟವರು ಗುರುತು ಹಿಡಿಯಲು ಆಗದಷ್ಟು ಸುಟ್ಟು ಕರಕಲಾಗಿದ್ದಾರೆ. ತನ್ನವರ ಗುರುತು ಪತ್ತೆಗೆ ಕುಟುಂಬಸ್ಥರು ಅಧಿಕಾರಿಗಳಿಗೆ ಡಿಎನ್ಎ ಮಾದರಿಗಳನ್ನು ಸಲ್ಲಿಸಿದ್ದು, ಕೆಲವರು ಗುರುತು ಪತ್ತೆಯಾಗಿದೆ.
ಇದುವರೆಗೆ 270 ಜನರು ಸಾವನ್ನಪ್ಪಿದ್ದಾರೆ, ಆಸ್ಪತ್ರೆ ಅಧಿಕಾರಿಗಳು ಭಾನುವಾರ ಡಿಎನ್ಎ ಹೊಂದಾಣಿಕೆಯ ಮೂಲಕ 47 ಮಂದಿಯ ಗುರುತನ್ನು ದೃಢಪಡಿಸಿದ್ದಾರೆ.
ಅಧಿಕಾರಿಗಳು 24 ಶ*ವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.




