ಗದಗ: ಮುಸ್ಲಿಂ ಯುವತಿಯನ್ನು ಪ್ರೇಮ ವಿವಾಹವಾಗಿದ್ದ ಯುವಕನೊಬ್ಬನ್ನು ಒತ್ತಾಯಪೂರ್ವಕ ಮತಾಂತರ ಮಾಡಿದ ಆರೋಪ ಕೇಳಿ ಬಂದಿದೆ.

ನಗರದ ಗಾಂಧಿನಗರದ ಸೆಟಲ್ಕೆಂಟ್ ನಿವಾಸಿ ವಿಶಾಲ ಗೋಕಾವಿ ಎಂಬ ಯುವಕ ತಹಸಿನ್ ಹೊಸಮನಿ ಎಂಬಾಕೆಯನ್ನು ಪ್ರೀತಿಸಿ 2024 ನವೆಂಬರ್ 24 ರಂದು ರಿಜಿಸ್ಟರ್ ವಿವಾಹವಾಗಿದ್ದ. ಆ ಬಳಿಕ ಮತಾಂತರವಾಗಿ ಇಸ್ಲಾಂ ಸಂಪ್ರದಾಯದಂತೆ ನಿಖಾ ಮಾಡಿಕೊಳ್ಳುವಂತೆ ಹೇಳಲಾಗಿದ್ದು, 2025 ಏಪ್ರಿಲ್ 25 ರಂದು ಮುಸ್ಲಿಂ ಸಂಪ್ರದಾಯದಂತೆ ಮತ್ತೆ ಮದುವೆ ಮಾಡಲಾಗಿದೆ.

ವಿಶಾಲ ಗೋಕಾವಿ ಸುದ್ದಿಗಾರರೊಂದಿಗೆ ಮಾತನಾಡಿ, “ಮೂರು ವರ್ಷಗಳಿಂದ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದೆ. ಒತ್ತಾಯಪೂರ್ವಕವಾಗಿ ಮತಾಂತರ ಮಾಡಿಸಿ, ಅವರ ಧರ್ಮದ ಪ್ರಕಾರವೇ ಮದುವೆ ಮಾಡಿಸಿದರು. ಬಳಿಕ ನಿತ್ಯ ನಮಾಜ್ ಮಾಡು ಎಂದೆಲ್ಲ ಹಿಂಸೆ ನೀಡಿದ್ದಾರೆ.ಯುವತಿಯ ಮನೆಯವರು ನನ್ನ ಹೆಸರನ್ನೂ ಬದಲಾವಣೆ ಮಾಡಿ ನಿರಂತರವಾಗಿ ಇಸ್ಲಾಂ ಸಂಪ್ರದಾಯ ಪಾಲಿಸುವಂತೆ, ಜಮಾತ್ ಗೆ ಹೋಗುವಂತೆ ಪೀಡಿಸಿದ್ದಾರೆ. ನನ್ನ ಹೆಸರನ್ನೂ ಬದಲಾಯಿಸಿದ್ದಾರೆ. ಸಾಲ ಇದೆ ಎಂದು ಹೇಳಿ ಹಣ ಸಹ ತೆಗೆದುಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಹಿಂದೂ ಸಂಘಟನೆಗಳ ಆಕ್ರೋಶ
ಘಟನೆ ಬಯಲಾಗುತ್ತಿದ್ದಂತೆ ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದು, ಗದಗ ಎಸ್ ಪಿ ಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಶಿವ ರಾಮಕೃಷ್ಣ ಸೇವಾ ಸಮಿತಿ ಸಂಚಾಲಕ ರಾಜು ಖಾನಪ್ಪನವರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ‘ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದ ವಿಶಾಲ ಗೋಕಾವಿ ಎಂಬ ಯುವಕ ಈ ರೀತಿ ಮೋಸ ಹೋಗಿದ್ದಾನೆ. ಈಗ ವಿಷಯ ಬೆಳಕಿಗೆ ಬರುತ್ತಿದ್ದಂತೆ ಆಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ ಎಂದು ತಿಳಿಸಿದರು. ವಿಶಾಲ ಅವರನ್ನು ಶೀಘ್ರದಲ್ಲೇ ಘರ್ ವಾಪ್ಪಿ ಮೂಲಕ ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಕರೆತರಲಾಗುವುದು ಎಂದ ಅವರು, ರಾಜ್ಯ ಸೇರಿ ದೇಶದೆಲ್ಲೆಡೆ ಹಿಂದೂಗಳ ಮತಾಂತರ ನಡೆಯುತ್ತಿದ್ದರೂ ಯಾವುದೇ ಪಕ್ಷದ ನಾಯಕರಾಗಲಿ, ಮಠಾಧೀಶರಾಗಲಿ ಧ್ವನಿ ಎತ್ತುತ್ತಿಲ್ಲ ಎಂದರು.




