ಮಲಪ್ಪುರಂ: ಕೇರಳದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಶುಕ್ರವಾರ (ಆ.01)ದಿಂದ ಸಾಂಪ್ರದಾಯಿಕವಾಗಿ ಪರಿಷ್ಕೃತ ಮಧ್ಯಾಹ್ನದ ಬಿಸಿ ಊಟ ನೀಡಲು ಮುಂದಾಗಿದೆ ಎಂದು ವರದಿ ತಿಳಿಸಿದೆ.

ವಿದ್ಯಾರ್ಥಿಗಳಲ್ಲಿ ಅಪೌಷ್ಠಿಕತೆ ಮತ್ತು ರಕ್ತಹೀನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ನೂತನ ಮೆನುವನ್ನು ಪರಿಚಯಿಸಲಾಗುತ್ತಿದ್ದು, ಇದು ಪೌಷ್ಠಿಕ ಮತ್ತು ವೈವಿಧ್ಯಮಯವಾಗಿರುವುದಾಗಿ ವರದಿ ವಿವರಿಸಿದೆ.
ಪೌಷ್ಠಿಕಾಂಶ ಮತ್ತು ವೈವಿಧ್ಯತೆಗೆ ಅದ್ಯತೆ:
ಪರಿಷ್ಕೃತ ಮೆನುವಿನಲ್ಲಿ ಆರೋಗ್ಯಕರ ಅನ್ನ ಆಧಾರಿತ ಭಕ್ಷ್ಯಗಳನ್ನು ಒಳಗೊಂಡಿದ್ದು ಅವು ಹೀಗಿವೆ:
1) ವೆಜಿಟೇಬಲ್ ಪ್ರೈಡ್ ರೈಸ್
2) ಲೆಮನ್ ರೈಸ್
3) ವೆಜಿಟೇಬಲ್ ಬಿರಿಯಾನಿ
4) ಟೊಮೆಟೊ ರೈಸ್
5) ಕೊಕೊನಟ್ ರೈಸ್
ಈ ಮುಖ್ಯ ಖಾದ್ಯಗಳನ್ನು ಪುದೀನ, ಶುಂಠಿ, ನೆಲ್ಲಿಕಾಯಿ ಮತ್ತು ಹಸಿ ಮಾವಿನಕಾಯಿಯಿಂದ ಮಾಡಿದ ಚಟ್ಟಿಯೊಂದಿಗೆ ಬಡಿಸಲಾಗುತ್ತದೆ. ಇತರ ದಿನಗಳಲಿ ಪೌಷ್ಠಿಕಾಂಶ ಆಹಾರದ ಸಮತೋಲನಕ್ಕಾಗಿ ರಾಗಿ ಗಂಜಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.
ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ನುಗ್ಗೆ ಸೊಪ್ಪು, ಹಲಸು, ಪಪ್ಪಾಯಿ ಮತ್ತು ಇತರ ಸ್ಥಳೀಯ ಉತ್ಪನ್ನಗಳನ್ನು ಬಳಸುವಂತೆ ಪ್ರೋತ್ಸಾಹ ನೀಡಲಾಗಿದೆ ಎಂದು ವರದಿ ತಿಳಿಸಿದೆ. ಈ ಯೋಜನೆಯು ಮಕ್ಕಳ ದೈನಂದಿನ ಆಹಾರದಲ್ಲಿ ಸ್ಥಳೀಯ, ಪೌಷ್ಠಿಕ ಭರಿತ ಆಹಾರವನ್ನು ಬಳಸುವ ರಾಜ್ಯದ ಆದ್ಯತೆ ಕಾರ್ಯಗಳ ಭಾಗವಾಗಿದೆ ಎಂದು ತಿಳಿಸಿದೆ.
ಬಿಸಿಯೂಟಕ್ಕೆ ಸೀಮಿತ ನಿಧಿ ಕಳವಳ:
ಮಧ್ಯಾಹ್ನದ ಬಿಸಿಯೂಟದ ಯೋಜನೆಯಡಿ 1ರಿಂದ 5ನೇ ತರಗತಿ ಸರ್ಕಾರಿ ವಿದ್ಯಾರ್ಥಿಗಳ ಪ್ರತೀ ಊಟಕ್ಕೆ ಸರ್ಕಾರ ಪ್ರಸಕ್ತ ಸಾಲಿನಲ್ಲಿ ನೀಡುವ ಹಣ 6.78 ರೂಪಾಯಿ ಮತ್ತು 8ರಿಂದ 11ನೇ ತರಗತಿವರೆಗಿನ ವಿದ್ಯಾರ್ಥಿಗಳ ಪ್ರತೀ ಊಟದ ಮೊತ್ತ 10.17 ರೂಪಾಯಿ!
ಪ್ರಸ್ತುತ ಅಡುಗೆ ಎಣ್ಣೆ ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ದುಬಾರಿಯಾದ ಪರಿಣಾಮ ಸರ್ಕಾರ ಮಧ್ಯಾಹ್ನದ ಊಟಕ್ಕೆ ನೀಡುವ ಬಜೆಟ್ ತುಂಬಾ ಕಡಿಮೆಯಾಗಿದೆ. ಅಲ್ಲದೇ ಬಿಸಿಯೂಟದ ಯೋಜನೆಗೆ ಹೆಚ್ಚಿನ ಹಣ ಹೊಂದಿಸಲು ಶಾಲೆಯ ಮುಖ್ಯ ಶಿಕ್ಷಕ/ಶಿಕ್ಷಕಿಯರಿಗೆ ದೊಡ್ಡ ಸವಾಲಾಗಿ ಪರಿಣಮಿಸಿರುವುದಾಗಿ ವರದಿ ತಿಳಿಸಿದೆ. ಜತೆಗೆ ಪರಿಷ್ಕೃತ ಮಧ್ಯಾಹ್ನದ ಊಟದ ಯೋಜನೆಗೆ ಸ್ಥಳೀಯ ಸಂಸ್ಥೆ, ದಾನಿಗಳ ನೆರವು ಪಡೆಯಲು ಸರ್ಕಾರ ಶಾಲೆಗಳಿಗೆ ನಿರ್ದೇಶನ ನೀಡಿದೆ!
ಕೇರಳ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ:
ಪರಿಷ್ಕೃತ ಮಧ್ಯಾಹ್ನದ ಊಟದ ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಕೇರಳ ಟೀಚರ್ಸ್ಟ್ ಅಸೋಸಿಯೇಶನ್ ಅಧ್ಯಕ್ಷರು ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
“ಒಂದೋ ಮಧ್ಯಾಹ್ನ ಊಟದ ಯೋಜನೆಗೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು ಇಲ್ಲವೇ ಹೆಚ್ಚು ಸಮರ್ಪಕವಾಗಿ ಈ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರಿ ಏಜೆನ್ಸಿಗಳಿಗೆ ಹಸ್ತಾಂತರಿಸಬೇಕು” ಎಂದು ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಕೆ.ಅಬ್ದುಲ್ ಮಜೀದ್ ತಿಳಿಸಿರುವುದಾಗಿ ವರದಿಯಾಗಿದೆ.




