ಹುಣಸೂರು; ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಾಲಯ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಷಡ್ಯಂತರ ಖಂಡಿಸಿ ಬಿಜೆಪಿ ಪಕ್ಷದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸಂವಿದಾನ ಸರ್ಕಲ್‌ನಲ್ಲಿ ಜಮಾವಣೆಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ದಿಕ್ಕಾರ ಮೊಳಗಿಸಿದರು.
ಈ ವೇಳೆ ಮಾತನಾಡಿದ ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಬಿಳಿಕೆರೆಪ್ರಸನ್ನ ಮತ್ತಿತರರು ಮಾತನಾಡಿ ಲಕ್ಷಾಂತರ ಮಂದಿಯ ಆರಾಧ್ಯ ದೈವ, ವಿಶ್ವದಾದ್ಯಂತ ಭಕ್ತ ಸಮೂಹ ಹೊಂದಿರುವ ಸತ್ಯ, ನ್ಯಾಯಕ್ಕೆ ಹೆಸರಾಗಿರುವ ಧರ್ಮಸ್ಥಳದ ಮಂಜುನಾಥಸ್ವಾಮಿಗೆ ಅಪಚಾರ ಸಲ್ಲದು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಜನಕಲ್ಯಾಣ ಕಾರ್ಯಕ್ರಮ ಸಹಿಸದ ಎಡಪಂತೀಯರು ನಡೆಸುತ್ತಿರುವ ಷಡ್ಯಂತರಕ್ಕೆ ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್ ಸರ್ಕಾರ ತಕ್ಷಣವೇ ಬೇಷರತ್ ಆಗಿ ಜನತೆ ಮುಂದೆ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.
ತಾಲೂಕು ಮಾಜಿ ಅಧ್ಯಕ್ಷ ಹನಗೋಡುಮಂಜುನಾಥ್ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮಾಭಿವೃದ್ದಿ, ಹಳ್ಳಿಗಳಲ್ಲಿ ಮಹಿಳೆಯರ ಜಾಗೃತಿ. ಆರ್ಥಿಕ ಸ್ವಾವಲಂಬನೆ. ದೇವಾಲಯಗಳ ಜಿರ್ಣೋದ್ದಾರ, ನಿರ್ಗತಿಕರ ಉಚಿತ ಮನೆ ನಿರ್ಮಾಣ. ಮಾಶಾಸನ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನಮನ್ನಣೆಗಳಿಸಿರುವುದನ್ನು ಸಹಿಸದೆ ಡಾ.ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬದವರ ವಿರುದ್ದ ವ್ಯಾಪಕ ಅಪಪ್ರಚಾರ ನಡೆಸುತ್ತಿದ್ದಾರೆ. ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಗಾಳಿ ಸುದ್ದಿ ಹಬ್ಬಿಸುವ ಮೂಲಕ ಹೆಗ್ಗಡೆಯವರ ತೇಜೋವದೆ ಮಾಡಲು ಹೊರಟಿರುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಜಿ.ಪಂ. ಮಾಜಿ ಸದಸ್ಯ ನಾಗರಾಜಮಲ್ಲಾಡಿ ಹೆಣ ಹೂತ್ತಿದ್ದೇನೆಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದ ಚಿನ್ನಯ್ಯ ಮಗಳನ್ನು ಕಳೆದುಕೊಂಡಿದ್ದೇನೆಂದು ಹೇಳಿಕೆ ನೀಡಿದ್ದ ಸೌಜನ್ಯ ತಾಯಿ ಸಹ ಎಸ್‌ಐಟಿ ಮುಂದೆ ಬಡಬಡಾಯಿಸುತ್ತಿದ್ದಾರೆ. ಬುರುಡೆ ಗ್ಯಾಂಗ್‌ನ ನಾಲ್ವರು ಜೊತೆಗೆ ಇವರ ಹಿಂದೆ ಇರುವ ವ್ಯಕ್ತಿಗಳನ್ನು ಎಸ್‌ಐಟಿ ಬಂಧಿಸಿ ಮಂಪರು ಪರೀಕ್ಷೆಗೊಳಪಡಿಸಿ ಧರ್ಮಸ್ಥಳದ ಅಸಂಖ್ಯಾತ ಭಕ್ತರು ಹಾಗೂ ದೇಶದ ಜನತೆಗೆ ಸತ್ಯವನ್ನು ತಿಳಿಸಬೇಕು. ರಾಜ್ಯ ಕಾಂಗ್ರೆಸ್ ಸರಕಾರ ಪ್ರಕರಣದ ಬಗ್ಗೆ ಮದ್ಯಂತರ ವರದಿ ಜನರ ಮುಂದಿಡಬೇಕೆಂದು ಆಗ್ರಹಿಸಿದರು.
ನಂತರ ತಾಲೂಕು ಆಡಳಿತಸೌಧದವರೆಗೆ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್ ಮಂಜುನಾಥರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯ ವಿವೇಕ್, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ವೆಂಕಟಮ್ಮ, ಅಧ್ಯಕ್ಷೆ ಕಮಲಮ್ಮ, ಮಂಜುಳಮ್ಮ, ಮುಖಂಡರಾದ ಸವಿತಾಚೌವ್ಹಾಣ್, ವಕೀಲ ಶಿವಕುಮಾರ್, ಚಂದ್ರು, ಅಶೋಕ್, ನಟರಾಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.




