ಜಾತಿ, ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಕಾಂಗ್ರೆಸ್ ಸರಕಾರ ಮಾಡುತ್ತಿದೆ: ಜನಾರ್ದನ ರೆಡ್ಡಿ

Share with

ಬಳ್ಳಾರಿ: ಕಾಂಗ್ರೆಸ್‌ ಸರ್ಕಾರ ಜಾತಿ ಗಣತಿ, ಸಮೀಕ್ಷೆ ಹೆಸರಲ್ಲಿ ಜಾತಿ ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ, ವೈಷಮ್ಯ ಮೂಡಿಸುವ ಕೆಲಸ ಮಾಡುತ್ತಿದೆ. ಸಾರ್ವಜನಿಕರೊಳಗೆ ದ್ವೇಷ ಭಾವನೆ ಮೂಡುವಂತೆ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ, ಇದಕ್ಕೆ ಬಿಜೆಪಿ ಧಿಕ್ಕಾರ ಹೇಳುತ್ತಿದೆ ಎಂದು ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದರು.

ಸೆ.21ರ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಾಸರ, ದಾರ್ಶನಿಕರ ಹೇಳಿಕೆಗಳನ್ನು ಕೇವಲ ಭಾಷಣದಲ್ಲಿ ಹೇಳಬಾರದು, ಅದನ್ನ ಅನುಸರಿಸಬೇಕು ಎಂದರು.

ಮಾನವ ಕುಲ ಒಂದಾಗಿ ಬಾಳುತ್ತಿದ್ದರೆ ಮಾತ್ರ ಮಾನವ ಕುಲಕ್ಕೆ ಒಳಿತು ಎಂದು ಬಸವಣ್ಣನವರು ಹೇಳಿದ್ದರು. ಕುಲ ಕುಲ ಎಂದು ಹೊಡೆದಾಡಬೇಡಿ ಎಂದು ಕನಕದಾಸರು ಹೇಳಿದ್ದರು. ಆದರೆ ಈ ರಾಜ್ಯದ ಮುಖ್ಯಮಂತ್ರಿ ಜಾತಿ ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಹೇಳಿದರು.

ಹಿಂದೂ ಸಮಾಜವನ್ನು ಒಡೆಯುವ ಕೊಳಕು ಕೆಲಸ ಮಾಡಲು ಸಿಎಂ ಮುಂದಾಗಿದ್ದಾರೆ. ಹಿಂದೂ ಜಾತಿ ಹೆಸರಿನ ಮುಂದೆ ಕ್ರಿಶ್ಚಿಯನ್ ಹೆಸರು ತಂದಿದ್ದಾರೆ. ಎಲ್ಲರೂ ಇದನ್ನು ಖಂಡಿಸುತ್ತಿದ್ದಾರೆ. ಸಾರ್ವಜನಿಕರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದರು.

ಹಿಂದೂ ಸಮಾಜವನ್ನು ಒಡೆಯುವ ದುಷ್ಟ, ಕುತಂತ್ರ ರಾಜಕಾರಣ ಕಾಂಗ್ರಸ್ ಗೆ ಬಿಟ್ರೆ ಬೇರೆ ಯಾವುದೇ ಪಕ್ಷಕ್ಕೆ ಇಲ್ಲ. ಕ್ರೈಸ್ತ ಮಿಷನರಿಯ ಬಲವಂತದ ಮತಾಂತರಕ್ಕೆ ಕೈ ಹಾಕಿದ್ದಾರೆ. ಕ್ರೈಸ್ತ ಸಮಾಜ ಮಾಡುವ ಹಠ ತೊಟ್ಟಿದ್ದಾರೆ ಎಂದು ಹೇಳಿದರು.

ಅದಕ್ಕೆ ಸಹಕಾರಿಯಾಗಿ ಒತ್ತು ಕೊಡುವುದಕ್ಕೆ ಕಾಂಗ್ರೆಸ್ ಪಕ್ಷ ಕೈ ಹಾಕಿದೆ. ಶೋಷಿತ ಸಮುದಾಯಗಳ ಮೀಸಲಾತಿಗೆ ಕೊಕ್ಕೆ ಹಾಕಲು ಮುಂದಾಗಿದ್ದಾರೆ. ಪ್ರಾಮಾಣಿಕವಾಗಿ ಸಮೀಕ್ಷೆ ಮಾಡಿದ್ದರೆ ಬಿಜೆಪಿ ಸ್ವಾಗತ ಮಾಡುತ್ತಿತ್ತು. ಆದರೆ ಸರ್ಕಾರ ಸ್ವಾರ್ಥ ರಾಜಕಾರಣ ಮಾಡುವ ದುಷ್ಟತನಕ್ಕೆ ಕೈ ಹಾಕಿದ್ದಾರೆ ಎಂದರು.

ಸಮೀಕ್ಷೆಗೆ ಸಂಬಂಧಿಸಿದಂತೆ ಅನಧಿಕೃತವಾಗಿ ಕ್ರೈಸ್ತ ಸಮುದಾಯ ಸೇರಿಸಿದೆ. ಲಿಂಗಾಯತ, ಒಕ್ಕಲಿಗ, ಕುರುಬ, ಬ್ರಾಹ್ಮಣ ಸೇರಿದಂತೆ 52 ಜಾತಿಗಳ ಮುಂದೆ ಕ್ರಿಶ್ಚಿಯನ್ ಸೇರಿಸಿದ್ದಾರೆ. ಸಮೀಕ್ಷೆ ಮಾಡುವುದಕ್ಕಿಂತ ಮುಂಚೆ ಸಮರ್ಪಕವಾಗಿ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಿ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬೇಕು. ಅದಕ್ಕೆ ಬೇಕಿರುವ ಪೂರಕ ತಯಾರಿ ಮಾಡಬೇಕು ಎಂದು ಹೇಳಿದರು.

ಸಮೀಕ್ಷೆ ವಿಚಾರವಾಗಿ ಬೇರೊಂದು ಕಲಂ ಕೊಟ್ಟು ಗೊಂದಲ ಮಾಡಿದ್ದಾರೆ. ಸಮೀಕ್ಷೆ ಕೈಗೊಳ್ಳುವಾಗ ಗೊಂದಲಕ್ಕೆ ಒಳಗಾಗಿ ಆ ಕಲಂ ನಲ್ಲಿ ತುಂಬಿಸಬಹುದು. ಬಿಜೆಪಿ ಇದನ್ನು ವಿರೋಧಿಸಿ ಹೋರಾಟ ಮಾಡುತ್ತಿದೆ, ಜನ ಸಾಮಾನ್ಯರು ಹಾಗೂ ಸ್ವತಃ ಕಾಂಗ್ರೆಸ್ ನವರೇ ವಿರೋಧಿಸಿದ್ದಾರೆ ಎಂದ ಅವರು, ಸ್ವತಃ ಗುಂಡೂರಾವ್ ಅವರೇ ಲೆಟರ್ ಬರೆದು ಖಂಡಿಸಿದ್ದಾರೆ ಎಂದರು.

ಹಿಂದೂ ಸಮಾಜವನ್ನು ಒಡೆಯುವುದಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ. ಇದನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.

ಮಾತಾಂತರ ಮಾಡುವ ಮಿಷನರಿಗಳಿಗೆ ಬೆಂಬಲ ಕೊಡುವುದಕ್ಕೆ ಸರ್ಕಾರ ಈ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ಇಟಲಿಯ ಸೋನಿಯಾಗಾಂಧಿ ಅವರನ್ನು ಮೆಚ್ಚಿಸಲು ಈ ಸಮೀಕ್ಷೆ ಮಾಡಲಾಗುತ್ತಿದೆ ಎಂದರು.


Share with

Leave a Reply

Your email address will not be published. Required fields are marked *